DAKSHINA KANNADA
ಮಂಗಳೂರು : ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದ ಕಡಬ ಆ್ಯಸಿಡ್ ದಾಳಿ ಸಂತ್ರಸ್ಥೆ ವಿದ್ಯಾರ್ಥಿನಿ..!
ಮಂಗಳೂರು : ಆ್ಯಸಿಡ್ ದಾಳಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಡಬದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಂತ್ರಸ್ಥೆ ವಿದ್ಯಾರ್ಥಿ ಆಂಬ್ಯುಲೆನ್ಸ್ ನಲ್ಲಿ ತೆರಳಿ ಸಿಇಟಿ ಪರೀಕ್ಷೆ ಬರೆದಿದ್ದು ಈ ಮೂಲಕ ತನ್ನ ಆತ್ಮವಿಶ್ವಾಸವನ್ನು ಎತ್ತಿ ತೋರಿಸಿದ್ದಾಳೆ.
ಮಾರ್ಚ್ 4ರಂದು ಕಾಲೇಜಿನಲ್ಲಿ ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿನಿ ಮೇಲೆ ಆರೋಪಿ ಅಬಿನ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದ. ಇದರಿಂದ ಇಬ್ಬರು ಸಹಪಾಠಿ ಸೇರಿ ಮೂವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಸಂತ್ರಸ್ಥೆ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇನ್ನೂ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ವಿದ್ಯಾರ್ಥಿನಿ ತನ್ನ ತಾಯಿಯೊಂದಿಗೆ ಐಸೋಲೇಶನ್ ವಾರ್ಡ್ ನಲ್ಲಿ ಇದ್ದುಕೊಂಡೇ ಸಿಇಟಿಗೆ ತಯಾರಿ ನಡೆಸುತ್ತಿದ್ದಳು. ಸಿಇಟಿಗಾಗಿ ಈಕೆ ಮತ್ತು ಇಬ್ಬರು ಸಹಪಾಠಿಗಳಿಗೆ ಪುತ್ತೂರಿನಲ್ಲಿ ಪರೀಕ್ಷಾ ಕೇಂದ್ರ ಕೂಡ ನಿಗದಿಯಾಗಿತ್ತು. ಚಿಕಿತ್ಸೆ ವೇಳೆ ದೂರದ ಪ್ರಯಾಣ ಮಾಡದಂತೆ ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಸಲಹೆ ನೀಡಿದ್ದ ಕಾರಣ ದ.ಕ ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರ ಗಮನಕ್ಕೆ ತಂದಿದ್ದರು. ಹೀಗಾಗಿ ಮಂಗಳೂರಿನ ಆಸ್ಪತ್ರೆಯಿಂದ ಸುಮಾರು ಒಂದು ಕಿ.ಮೀ ದೂರದಲ್ಲಿರುವ ನಂತೂರು ಪದುವ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಬರೆಯಲು ಬಾಲಕಿಗೆ ಅನುಮತಿಸಲಾಗಿತ್ತು.
ಗುರುವಾರ ಬಾಲಕಿ ತನ್ನ ತಾಯಿಯೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಕಾಲೇಜಿಗೆ ಬಂದು ವ್ಯವಸ್ಥೆ ಮಾಡಲಾಗಿದ್ದ ಪ್ರತ್ಯೇಕ ಕೊಠಡಿಯಲ್ಲಿ ಜೀವಶಾಸ್ತ್ರ ಪತ್ರಿಕೆಯ ಪರೀಕ್ಷೆ ಬರೆದಿದ್ದು ಬಳಿಕ ಮಧ್ಯಾಹ್ನ 12.15ಕ್ಕೆ ಆಸ್ಪತ್ರೆಗೆ ಮರಳಿ 2.30 ಕ್ಕೆ ಮತ್ತೆ ಗಣಿತ ಪರೀಕ್ಷೆಗೆ ಬರೆದಿದ್ದಾಳೆ. ಶುಕ್ತವಾರದಂದು ಭೌತ ಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯದ ಪರೀಕ್ಷೆಗಳನ್ನು ಬರೆದಿದ್ದಾರೆ.
ಇದರ ಜೊತೆಗೆ ಸಂತ್ರಸ್ಥೆ ಮತ್ತು ಆಕೆಯ ಇಬ್ಬರು ಸಹಪಾಠಿಗಳು ಎಪ್ರಿಲ್ 29 ರಂದು ಪ್ರಾರಂಭವಾಗುವ ಪಿಯುಸಿ ಮರು ಪರೀಕ್ಷೆಗೂ ಅರ್ಜಿ ಸಲ್ಲಿಸಿದ್ದಾರೆ. “ವೈದ್ಯರ ಸಲಹೆಯಂತೆ ಇಲಾಖೆಯು ಮರು ಪರೀಕ್ಷೆಗೆ ಹಾಜರಾಗಲು ಅನುಕೂಲವಾಗುವಂತೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.