LATEST NEWS
ಮಂಗಳೂರಿನಲ್ಲಿ ಉಲ್ಬಣಗೊಂಡ ನೀರಿನ ಸಮಸ್ಯೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೇ ರದ್ದುಗೊಳಿಸಿದ ಹೋಟೆಲ್ ಗಳು
ಮಂಗಳೂರಿನಲ್ಲಿ ಉಲ್ಬಣಗೊಂಡ ನೀರಿನ ಸಮಸ್ಯೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೇ ರದ್ದುಗೊಳಿಸಿದ ಹೋಟೆಲ್ ಗಳು
ಮಂಗಳೂರು ಮೇ 18: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿ ಸಂಪೂರ್ಣ ಬತ್ತಿ ಹೋಗಿದೆ. ಜಿಲ್ಲೆಯ ಜನರಿಗೆ ಒಂದೆಡೆ ಕುಡಿಯುವ ನೀರಿಗೆ ಬರವಾದರೆ, ಇನ್ನೊಂದೆಡೆ ಪುಣ್ಯಕ್ಷೇತ್ರಗಳ ತೀರ್ಥಸ್ನಾನಕ್ಕೂ ನೀರಿಲ್ಲದಂತಾಗಿದೆ.
ಈ ನಡುವೆ ನೀರಿನ ಬರ ಹೋಟೆಲ್ ಉದ್ಯಮದ ಮೇಲೆಯೂ ತನ್ನ ಪರಿಣಾಮವನ್ನು ಬೀರಿದೆ. ನೀರಿಲ್ಲದ ಕಾರಣ ಕೆಲವು ಹೋಟೆಲ್ ಗಳಲ್ಲಿ ಊಟದ ವ್ಯವಸ್ಥೆಯನ್ನೇ ರದ್ದು ಮಾಡಲಾಗಿದ್ದು, ಇನ್ನು ಕೆಲವು ಹೋಟೆಲ್ ಗಳಲ್ಲಿ ಸ್ಟೀಲ್ ಲೋಟ,ತಟ್ಟೆಗಳ ಬದಲು ಪ್ಲಾಸ್ಟಿಕ್ ಹಾಗೂ ಪೇಪರ್ ಲೋಟ, ತಟ್ಟೆಗಳನ್ನು ಬಳಸಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿದೆ. ಪ್ಲೇಟ್ ತೊಳೆಯಲು ನೀರಿಲ್ಲ ಎನ್ನುವ ಅಸಹಾಯಕತೆಯನ್ನೂ ವ್ಯಕ್ತಪಡಿಸಿವೆ. ಅಲ್ಲದೆ ಸ್ಟೀಲ್ ಗ್ಲಾಸ್ , ತಟ್ಟೆಗಳ ಬದಲಾಗಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ಹಾಗೂ ಪೇಪರ್ ಲೋಟ ಹಾಗೂ ತಟ್ಟೆಗಳನ್ನು ಬಳಕೆ ಮಾಡಬೇಕಾದ ಸ್ಥಿತಿಯೂ ನಿರ್ಮಾಣಗೊಂಡಿದೆ.
ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ಜೀವನದಿಯಾದ ನೇತ್ರಾವತಿಯಲ್ಲಿ ನೀರಿನ ಸೆಲೆ ಸಂಪೂರ್ಣ ಕ್ಷೀಣಿಸಿದೆ. ರಾಜ್ಯ ಸರಕಾರದ ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ನದಿಗೆ ಯಾವುದೇ ತೊಂದರೆಯಿಲ್ಲ ಎನ್ನುವ ವಾದಗಳ ನಡುವೆಯೂ ಇದೀಗ ನೇತ್ರಾವತಿ ನದಿಯಲ್ಲಿ ಈ ಯೋಜನೆಯ ದುಷ್ಪರಿಣಾಮ ಒಂದೊಂದೇ ಕಣ್ಣ ಮುಂದೆ ಬರಲಾರಂಭಿಸಿದೆ.
ಯೋಜನೆಗಾಗಿ ಒಂದೆಡೆ ಪಶ್ವಿಮಘಟ್ಟಗಳ ಅರಣ್ಯಗಳ ಮಾರಣಹೋಮ ನಡೆದರೆ, ಇನ್ನೊಂದೆಡೆ ಅರಣ್ಯ ಪ್ರದೇಶಗಳಲ್ಲಿ ಜಲ ವಿದ್ಯುತ್ ಘಟಕಗಳಂತಹ ಯೋಜನೆಗಳು ತಲೆ ಎತ್ತುತ್ತಿರುವುದು ದಕ್ಷಿಣಕನ್ನಡ ಜಿಲ್ಲೆಯ ಜನರಿಗೆ ನೀರಿನ ಕ್ಷಾಮ ಉಂಟಾಗಲು ಪ್ರಮುಖ ಕಾರಣ ಎನ್ನಲಾಗಿದೆ.
ಎತ್ತಿನಹೊಳೆ ಯೋಜನೆಯಿಂದಾಗಿ ನೇತ್ರಾವತಿಯಲ್ಲಿ ಇದೀಗ ನೀರಿನ ಹರಿವು ಸಂಪೂರ್ಣ ನಿಂತು ಹೋದ ಕಾರಣ ನದಿಯಲ್ಲಿ ನೀರಿನಲ್ಲದೆ, ಜಿಲ್ಲೆಯ ಜನರಿಗೆ ನೀರು ಪೂರೈಸುವ ಡ್ಯಾಂಗಳು ಬರಿದಾಗಿವೆ. ಕೋಟ್ಯಾಂತರ ರೂಪಾಯಿ ವ್ಯಯಿಸಿ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟುವಿನಲ್ಲಿ ನಿರ್ಮಾಣಗೊಂಡ ನೀರಿನ ರೇಚಕ ಸ್ಥಾವರಕ್ಕೂ ನೀರಿನ ಕೊರತೆ ಎದುರಾಗಿದೆ.
ಇಂಥ ಪರಿಸ್ಥಿತಿಯ ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ಕಾಣಲಾರಂಭಿಸಿದ್ದು, ಪುಣ್ಯಕ್ಷೇತ್ರಗಳಾದ ಧರ್ಮಸ್ಥಳದಲ್ಲಿ ನೇತ್ರಾವತಿ ಬರಿದಾಗಿದ್ದರೆ, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಪಶ್ಚಿಮಘಟ್ಟಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಹೂಳಿನಿಂದಾಗಿ ಕಲುಷಿತಗೊಂಡಿದೆ. ಹಲವು ವರ್ಷಗಳ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರಿನ ಬರ ಕಾಣಿಸಿಕೊಳ್ಳುವುದಕ್ಕೆ ನೇತ್ರಾವತಿ ಮೂಲಕ್ಕೆ ಕೈ ಹಾಕಿರುವುದೇ ಕಾರಣ ಎನ್ನುವ ಅಭಿಪ್ರಾಯವೂ ಕೇಳಿ ಬರಲಾರಂಭಿಸಿದೆ.
ಮಂಗಳೂರು ನಗರಕ್ಕೆ ಇದೀಗ ವಾರಕ್ಕೆ ಎರಡು ದಿನ ಮಾತ್ರ ನೀರು ಪೂರೈಸುವ ಸ್ಥಿತಿಯಲ್ಲಿ ಜಿಲ್ಲಾಡಳಿತವಿದೆ. ಅಲ್ಲದೆ ನೇತ್ರಾವತಿ ನದಿಯ ತಟದಲ್ಲೇ ಇರುವ ಬಂಟ್ವಾಳ ತಾಲೂಕಿನಲ್ಲೂ ಎರಡು ದಿನಕ್ಕೊಮ್ಮ ನೀರು ಪೂರೈಸಬೇಕಾದ ಸ್ಥಿತಿಯೂ ಇದೆ. ಈ ನಡುವೆ ಎತ್ತಿನಹೊಳೆ ಯೋಜನೆಯ ದುಷ್ಪರಿಣಾಮ ಇದೀಗ ಜಿಲ್ಲೆಯ ಜನತೆಗೆ ಒಂದೊಂದಾಗಿಯೇ ತಿಳಿಯಲಾರಂಭಿಸಿದೆ.