Connect with us

    DAKSHINA KANNADA

    ಮಂಗಳೂರು : ಮಣ್ಣು ಕುಸಿತದಲ್ಲಿ ಕಾರ್ಮಿಕರಿಬ್ಬರ ಜೀವನ್ಮರಣ ಹೋರಾಟ, ಬಿಲ್ಡರ್ – ಜಿಲ್ಲಾಡಳಿತದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವೇ ಕಾರಣ  ಪರಿಹಾರಕ್ಕೆ ಕಟ್ಟಡ ಕಾರ್ಮಿಕರ ಸಂಘಟನೆ ಆಗ್ರಹ

    ಮಂಗಳೂರು : ಮಂಗಳೂರಿನಲ್ಲಿ ಮಣ್ಣು ಕುಸಿತದಿಂದ ಕಾರ್ಮಿಕರಿಬ್ಬರು ಜೀವನ್ಮರಣ ಹೋರಾಟದಲ್ಲಿದ್ದು ಈ ದುರ್ಘಟನೆಗಳಿಗೆ  ಬಿಲ್ಡರ್ ಮತ್ತು ಜಿಲ್ಲಾಡಳಿತದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವೇ ಕಾರಣ ಎಂದು ಕಟ್ಟಡ ಕಾರ್ಮಿಕರ ಸಂಘಟನೆ ಆರೋಪಿಸಿದೆ.

    ಮಂಗಳೂರು ನಗರದ ಬಲ್ಮಠ ವಾಸುಲೇನ್ ಬಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿ ಕಟ್ಟಡದ ನಿರ್ಮಾಣ ಕಾರ್ಯದಲ್ಲಿ ನಿರತರಾದ ಉತ್ತರಭಾರತ ಮೂಲದ ಕಾರ್ಮಿಕರಿಬ್ಬರು ಮಣ್ಣು .ಕುಸಿತದಿಂದಾಗಿ ಮಣ್ಣಿನ ಅಡಿಯಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿದ್ದಾರೆ.
    ಇದಕ್ಕೆ ಬಿಲ್ಡರ್ ಹಾಗೂ ಜಿಲ್ಲಾಡಳಿತದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯವೇ ನೇರ ಕಾರಣ. ಈ ದುರಂತದ ಹೊಣೆ ಹೊತ್ತು ಕಾರ್ಮಿಕರಿಗೆ ಸರಕಾರದ ವತಿಯಿಂದ ದೊರಕುವ ವಿಪತ್ತು ಪರಿಹಾರ ನಿಧಿ ಮಾತ್ರವಲ್ಲದೆ, ಸಾವು ಸಂಭವಿಸಿದ್ದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಕಂಪೆನಿ, ಗುತ್ತಿಗೆದಾರರ ಕಡೆಯಿಂದಲೂ ತಲಾ 50 ಲಕ್ಷ ರೂ.ಪರಿಹಾರ ಕೊಡಿಸಬೇಕೆಂದು CITUಗೆ ಸಂಯೋಜಿತಗೊಂಡಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ. ಹಾಗೂ ಪ್ರಾಣಹಾನಿಗೆ ಕಾರಣವಾಗುವ ದುರ್ಘಟನೆಯನ್ನು ಕ್ರಿಮಿನಲ್ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

    ನಗರದೆಲ್ಲೆಡೆ ಬಹುಮಹಡಿ ಕಟ್ಟಡಗಳು ವೇಗವಾಗಿ ತಲೆ ಎತ್ತುತ್ತಿದೆ. ಅದರ ನಿರ್ಮಾಣ ಕೆಲಸಕ್ಕೆ ಪ್ರಜ್ಞಾಪೂರ್ವಕವಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ನಿರಾಕರಿಸಿ ಅತ್ಯಂತ ನಿಕ್ರಷ್ಟ ಕೂಲಿಗೆ ಉತ್ತರ ಬಾರತದ ವಲಸೆ ಕಾರ್ಮಿಕರನ್ನು ಕರೆತಂದು ಯಾವುದೇ ನಿಯಮಗಳನ್ನು ಪಾಲಿಸದೆ ದುಡಿಸಲಾಗುತ್ತದೆ. ಇಂತಹ ಕಾರ್ಮಿಕರ ಸಂಪೂರ್ಣ ವಿವರ ಕಾರ್ಮಿಕ ಇಲಾಖೆಯಲ್ಲಿ ಲಭ್ಯ ಇರಬೇಕೆಂದಿದ್ದರೂ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಹಾಗೂ ಬಿಲ್ಡರ್ ಗಳು ಅಂತಹ ಯಾವುದೇ ಮಾಹಿತಿಗಳನ್ನು ನೀಡದೆ ಕಾರ್ಮಿಕರಿಗೆ ಅನ್ಯಾಯವೆಸಗುತ್ತಿದ್ದಾರೆ. ಕಾರ್ಮಿಕ ಇಲಾಖೆಯೂ ಕೂಡ ಈ ಬಗ್ಗೆ ತೀರಾ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ.ಇಂತಹ ಘಟನೆಗಳು ದ‌ಕ.ಜಿಲ್ಲೆಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇಂತಹ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ದುಡಿಯುವ ಯಾವುದೇ ಪ್ರದೇಶದ ಬಡಪಾಯಿ ಕಾರ್ಮಿಕರು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜೀವ ತೆರುವುದು, ಅಂಗ ವೈಕಲ್ಯಕ್ಕೆ ಒಳಗಾಗುವುದು ಸಾಮಾನ್ಯ ಎಂಬಂತಾಗಿದೆ. ಕಾರ್ಮಿಕರ ಇಂತಹ ದಯನೀಯ ಸ್ಥಿತಿಗೆ ಹೊಣೆ ಹೊರುವವರು, ಅವರ ಅನಾಥ ಕುಟುಂಬಗಳ ಜವಾಬ್ದಾರಿ ಹೊರುವವರು ಯಾರು ಎಂದು ಕಟ್ಟಡ ಕಾರ್ಮಿಕರ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

    ಮಂಗಳೂರು ನಗರದಲ್ಲಿ ಬಹುಮಹಡಿ ನಿರ್ಮಾಣ ಕಾಮಗಾರಿ ಸಂದರ್ಭ ಈ ರೀತಿಯ ಅವಘಡ ಸಂಭವಿಸುವುದು ಪದೇ ಪದೆ ನಡೆಯುತ್ತಿದೆ. ಇಂತಹ ಅವಘಡದಲ್ಲಿ ಪ್ರಾಣ ಕಳೆದುಕೊಳ್ಳುವ ವಲಸೆ ಕಾರ್ಮಿಕರಿಗೆ ಯಾವುದೇ ಪರಿಹಾರಗಳು ನೀಡುವುದಾಗಲಿ, ನಿರ್ಲಕ್ಷ್ತಕ್ಕೆ ಸಂಬಂಧ ಪಟ್ಟವರನ್ನು ಹೊಣೆಗಾರರನ್ನಾಗಿಸಿ ವಿಚಾರಣೆ ನಡೆಸುವುದಾಗಲಿ ನಡೆಯುತ್ತಿಲ್ಲ‌. ಕಾರ್ಮಿಕರ ಕುರಿತಾದ ಇಂತಹ ಅನಾದಾರದ ನಡೆಯನ್ನು ಯಾವ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈಗ ನಡೆದಿರುವ ದುರ್ಘಟನೆಯಲ್ಲಿ ಕ್ರಮ ಜರುಗಿಸಿ, ಪರಿಹಾರ ನೀಡದಿದ್ದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು. ಮಳೆಗಾಲದ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳಬೇಕು, ನಿಯಮ ಉಲ್ಲಂಘಿಸುವ ಬಿಲ್ಡರ್ ಗಳು, ಗುತ್ತಿಗೆದಾರರನ್ನು, ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಇಂತಹ ಘಟನೆಗಳಿಗೆ ಹೊಣೆಗಾರರನ್ನಾಗಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

    ಬಡವರ,ದುಡಿದು ತಿನ್ನುವವರ,ಅಮಾಯಕರ ಜೀವಕ್ಕೆ ಬೆಲೆ ಇಲ್ಲವೇ…..?

    ಕೇವಲ ಹೊಟ್ಟೆಪಾಡಿಗಾಗಿ ಉತ್ತರ ಭಾರತದ ರಾಜ್ಯಗಳಿಂದ ಅಗಮಿಸಿ ನಿಕ್ರಷ್ಟ ಕೂಲಿಗೆ ದುಡಿಯುವ ಕಾರ್ಮಿಕ ವರ್ಗವನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಜಿಲ್ಲೆಯ ಭೂಮಾಫಿಯಾದ ರೂವಾರಿಗಳು,ಬಿಲ್ಡರ್ ಗಳು,ಕಟ್ಟಡ ನಿರ್ಮಾಣ ಗುತ್ತಿಗೆದಾರರ ನಡೆಯು ತೀರಾ ಖಂಡನೀಯ.ವಲಸೆ ಕಾರ್ಮಿಕರ ದಾಖಲೆಯನ್ನು ಮಾಡಬೇಕಾದ ಕಾರ್ಮಿಕ ಇಲಾಖೆ ಬಿಲ್ಡರ್ ಮಾಫಿಯಾದ ಎಂಜಲು ಕಾಸಿಗೆ ಕೈಯೊಡ್ಡಿ ಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತೆ ಮಾಡಿದೆ.ಕಾರ್ಮಿಕರ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ ಬಿಲ್ಡರ್ ಗಳ ಹಾಗೂ ಗುತ್ತಿಗೆದಾರರಿಗೆ ಮೂಗುದಾರ ತೊಡಿಸಿ ಕಾರ್ಮಿಕ ಇಲಾಖೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಬೇಕಾದ ದ.ಕ. ಜಿಲ್ಲಾಡಳಿತ ಬಾಯಿ ಮುಚ್ಚಿ ತೆಪ್ಪಗೆ ಕುಳಿತಿದೆ.ಈಗಾಗಲೇ ದ.ಕ. ಜಿಲ್ಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆದರೂ ಯಾರೂ ಬಾಯಿ ಬಿಡುತ್ತಿಲ್ಲ.ಹಾಗಾದರೆ ಇಲ್ಲಿ ಬಡವರ,ದುಡಿದು ತಿನ್ನುವವರ,ಅಮಾಯಕರ ಜೀವಕ್ಕೆ ಬೆಲೆ ಇಲ್ಲವೇ…..? ಎಂದು CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಶ್ನಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *