Connect with us

  LATEST NEWS

  ಬಲ್ಮಠ ಭೂಕುಸಿತ ಪ್ರಕರಣ – ಸತತ ಏಳು ಗಂಟೆ ಕಾರ್ಯಾಚರಣೆ – ಓರ್ವ ಕಾರ್ಮಿಕ ಸಾವು

  ಮಂಗಳೂರು ಜುಲೈ 03 : ನಿರ್ಮಾಣ ಹಂತದ ಕಟ್ಟಡದ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಿಲುಕಿದ ಪ್ರಕರಣದಲ್ಲಿ ಒಬ್ಬ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಇನ್ನೊಬ್ಬ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶದ ಮೂಲದ ಚಂದನ್ ಕುಮಾರ್ ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ಬಿಹಾರ ಮೂಲದ ರಾಜ್​ಕುಮಾರ್​ನನ್ನು ರಕ್ಷಿಸಲಾಗಿದೆ.


  ಸತತ 7 ಗಂಟೆ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳ ಮಣ್ಣಿನಡಿಯಿಂದ ಚಂದನ್ ಕುಮಾರ್ ಮೃತದೇಹವನ್ನು ಮೇಲಕ್ಕೆತ್ತಿದೆ. ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ.

  ಬಲ್ಮಠದ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ವಾಣಿಜ್ಯ ಕಟ್ಟಡವೊಂದರ ಕಾಮಗಾರಿ ನಡೆಸಲಾಗುತ್ತಿದ್ದು, ಅದರ ತಳಪಾಯದ ಕೆಲಸಕ್ಕಾಗಿ 20 ಅಡಿ ಆಳಕ್ಕೆ ಅಗೆಯಲಾಗಿದೆ. ಹೊಂಡದಲ್ಲಿ ಒಂದು ಕಡೆಯಿಂದ ತಳಪಾಯದ ಕಾಂಕ್ರೀಟ್ ಕೆಲಸ ಮಾಡುತ್ತಿದ್ದು, ಇದರ ನಡುವಲ್ಲೇ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪಾರ್ಶ್ವದಲ್ಲಿ ಧರೆ ಕುಸಿದು ಬಿದ್ದಿತ್ತು. ಸುಮಾರು ಎಂಟಡಿ ಎತ್ತರಕ್ಕೆ ಸಪೂರವಾಗಿದ್ದ ಜಾಗದಲ್ಲಿ ಮಣ್ಣು ಕುಸಿದಿದ್ದು, ಬಿಹಾರ ಮೂಲದ ಇಬ್ಬರು ಕಾರ್ಮಿಕರು ಅದರೊಳಗೆ ಸಿಲುಕಿದ್ದರು.

  ಈ ವೇಳೆ ರಕ್ಷಣಾ ಕಾರ್ಯಾಚರಣೆ ನಡೆಸಿ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿತ್ತು, ಆದರೆ ಮತ್ತೋಬ್ಬ ಕಾರ್ಮಿಕರ ರಕ್ಷಣೆ ಕಾರ್ಯ ಮಾತ್ರ ಕಷ್ಟವಾಗಿದ್ದು, ಕಾಂಕ್ರೀಟ್ ಸ್ಲ್ಯಾಬ್ ಅನ್ನು ರಂಧ್ರ ಕೊರೆದು ಮಣ್ಣಿನಡಿ ಸಿಲುಕಿದ್ದ ಚಂದನ್ ಕುಮಾರ್​ನನ್ನು ಪತ್ತೆ ಮಾಡಲಾಗಿತ್ತು. ಮಧ್ಯಾಹ್ನ 3.45ರ ಸುಮಾರಿಗೆ ಆತನ ಕೈ ರಂಧ್ರ ಕೊರೆದಿರುವ ಸ್ಲ್ಯಾಬ್ ನಿಂದ ಕಾಣಿಸುತ್ತಿತ್ತು. ಈ ವೇಳೆ ಆತನ ಪರಿಸ್ಥಿತಿ ಗಂಭೀರವಾಗಿತ್ತು. ಕೊನೆಗೆ ರಾತ್ರಿ ಏಳೂವರೆ ವೇಳೆಗೆ ಆತನ ಮೃತದೇಹವನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.

  ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಡಿಸಿ ಸಂತೋಷ್ ಕುಮಾರ್, ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ದಾರ್ಥ್ ಗೋಯಲ್ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದರು.ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪ್ರಾರಂಭವಾದ ಬಳಿಕ ಮಳೆಗೆ ಸಂಬಂಧಿಸಿದಂತೆ ಸಾವನಪ್ಪಿದವರ ಸಂಖ್ಯೆ 8ಕ್ಕೇ ಏರಿಕೆಯಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply