LATEST NEWS
ದಕ್ಷಿಣಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕಡ್ಡಾಯಕ್ಕೆ ನಿರ್ಣಯ

ಮಂಗಳೂರು, ಜನವರಿ 27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 100ಕ್ಕೂ ಹೆಚ್ಚು ಮುಜರಾಯಿಯೇತರ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಕಡ್ಡಾಯಗೊಳಿಸಲು ದೇವಾಲಯಗಳ ವಿಶ್ವಸ್ಥರು ಒಪ್ಪಿದ್ದಾರೆ. ಹಂತ ಹಂತವಾಗಿ ಜಾರಿಗೊಳಿಸಲಾಗುವುದು’ ಎಂದು ಕರ್ನಾಟಕ ದೇವಸ್ಥಾನ– ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕ ಮೋಹನ ಗೌಡ ಹೇಳಿದರು.
ದೈವ, ದೇವಸ್ಥಾನ ಮತ್ತು ಸಂಸ್ಕೃತಿ ರಕ್ಷಣೆ ಸಂಬಂಧ ಹಿಂದೂ ಜನಜಾಗೃತಿ ಸಮಿತಿ ಮಂಗಳೂರಿನಲ್ಲಿ ದೇವಸ್ಥಾನಗಳ ಪರಿಷತ್ ಸಭೆ ನಡೆಸಿದೆ. ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ದೈವ, ದೇವಾಲಯಗಳ ಪಾವಿತ್ರತೆ, ವಸ್ತ್ರ ಸಂಹಿತೆ, ದೇವಾಲಯಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಕುರಿತು ಚರ್ಚಿಸಲಾಯಿತು.

ಪ್ರತಿ ದೇವಾಲಯಗಳಲ್ಲಿ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುವುದು. ಧಾರ್ಮಿಕ ಪಾಠದ ಮೂರು ತಿಂಗಳ ಕೋರ್ಸ್ನ್ನು ಹಿಂದೂ ಜನಜಾಗೃತಿ ಸಮಿತಿ ಸಿದ್ದ ಪಡಿಸಿದೆ. ಈ ಕೋರ್ಸ್ನಲ್ಲಿ ಹಿಂದೂ ಧರ್ಮ, ದೇವರುಗಳ, ಆಚಾರ ವಿಚಾರ, ಸಂಸ್ಕೃತಿ, ಪದ್ದತಿ, ಪರಂಪರೆಗಳ ಬಗ್ಗೆ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಇನ್ನು ವಾರಕ್ಕೆ ಒಂದು ದಿನ ಪ್ರತಿ ದೇವಾಲಯಗಳಲ್ಲಿ ಧಾರ್ಮಿಕ ಪಾಠ ನಡೆಸಬೇಕು. ದೇವಾಲಯಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಪ್ರಚಾರ ಮಾಡಲು ನಿರ್ಣಯಿಸಲಾಯಿತು.
ಜಿಲ್ಲೆಯ ವಿವಿಧ ದೇವಸ್ಥಾನಗಳ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದ ಸಭೆಯಲ್ಲಿ ಸ್ವೀಕರಿಸಿದ ಪ್ರಮುಖ ನಿರ್ಣಯಗಳು:
*ದೇವಸ್ಥಾನಗಳ ಜಾತ್ರೆ, ಉತ್ಸವ ಇತ್ಯಾದಿ ಸಂದರ್ಭಗಳಲ್ಲಿ ಅನ್ಯಮತೀಯರಿಗೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬಾರದು.
*ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳಿಂದ ಸಂಗ್ರಹವಾಗುವ ಕಾಮನ್ ಪೂಲ್ ನಿಧಿಯನ್ನು ಹಿಂದೂ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸಬೇಕು.
* ರಾಜ್ಯದ ಅನೇಕ ದೇವಸ್ಥಾನಗಳು ಸರ್ಕಾರದ ನಿಯಂತ್ರಣದಲ್ಲಿದ್ದು, ಅವನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಬೇಕು.