DAKSHINA KANNADA
ಲಂಚಕ್ಕೆ ಕೈಯೊಡ್ಡಿದ್ದ ಮುಡಾ ಆಯುಕ್ತ ಮನ್ಸೂರ್ ಅಲಿಗೆ ಸದ್ಯ ಜೈಲೇ ಗತಿ..!
ಮಂಗಳೂರು : ಉದ್ಯಮಿಯೋರ್ವರಿಂದ 25 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಆಯುಕ್ತ ಮನ್ಸೂರ್ ಅಲಿ ಗೆ ಸದ್ಯ ಜೈಲೇ ಗತಿ.
ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜಾಮೀನು ನಿರಾಕರಿಸಿದ್ದು ಈ ಹಿನ್ನೆಲೆಯಲ್ಲಿ ಜೈಲ್ಲಲೇ ಇರಬೇಕಿದೆ.
ಮಾ.23ರಂದು ಮುಡಾ ಆಯುಕ್ತ ಮನ್ಸೂರ್ ಅಲಿಯ ನಿರ್ದೇಶನದಂತೆ ಬ್ರೋಕರ್ ಮಹಮ್ಮದ್ ಸಲಿಂ ಎಂಬಾತ 25 ಲಕ್ಷ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2024 ಕಲಂ 7(ಎ) ಭ್ರಷ್ಟಾಚಾರ ನಿರ್ಬಂಧಕ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ, 2018) ರಡಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ದಸ್ತಗಿರಿ ಮಾಡಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಏಪ್ರಿಲ್ 8ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬಳಿಕ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು. ಇದೀದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ಎಸ್ ವಿಚಾರಣೆ ನಡೆಸಿ, ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದಾರೆ.