DAKSHINA KANNADA
ಇನ್ನೂ ಬಗೆಹರಿಯದ ಆಸಿಯಾ –ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ಪ್ರಕರಣ – ವಂಚನೆಗೊಳಗಾದ ಮಹಿಳೆಯಿಂದ ಸುಳ್ಯದ ಚಪ್ಪಲಿ ಮಳಿಗೆಯಲ್ಲಿ ಧರಣಿ

ಸುಳ್ಯ ಡಿಸೆಂಬರ್ 10: ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡ ಆಸಿಯಾ–ಇಬ್ರಾಹಿಂ ಖಲೀಲ್ ಕಟ್ಟೆಕ್ಕಾರ್ ವಿವಾಹ ಪ್ರಕರಣದ ಗೊಂದಲ ಮುಂದುವರೆದಿದ್ದು, ಇದೀಗ ನ್ಯಾಯಕ್ಕಾಗಿ ಆಸಿಯಾ ಗಾಂಧಿನಗರದಲ್ಲಿರುವ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ರಾತ್ರಿಯಿಂದ ಧರಣಿ ಕುಳಿತಿರುವ ಘಟನೆ ನಡೆದಿದೆ.
ಕೇರಳ ಕಣ್ಣೂರಿನ ಪ್ರತಿಷ್ಠಿತ ಕುಟುಂಬದ ಮಹಿಳೆ ಶಾಂತಿ ಜೂಬಿ 2017 ರಲ್ಲಿ ಪತಿಯನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಇಬ್ರಾಹಿಂ ಖಲೀಲ್ ಜೊತೆ ಮದುವೆಯಾಗಿದ್ದರು, ಮದುವೆಗೂ ಮುನ್ನ ಮತಾಂತರ ಆಗಬೇಕು ಅನ್ನುವ ಷರತ್ತು ವಿಧಿಸಿದ್ದ ಖಲೀಲ್ ಈ ಹಿನ್ನಲೆ ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮಗುರುಗಳ ಎದುರು ಮತಾಂತರಗೊಂಡು ಆಸಿಯಾ ಎಂಬ ಹೆಸರಿನಿಂದ ಖಲೀಲ್ ಜೊತೆ ಮದುವೆಯಾಗಿದ್ದರು. ಆದರೆ ಕಳೆದ ಏಳೆಂಟು ತಿಂಗಳಿಂದ ಅಸಿಯಾ ಳನ್ನು ಬಿಟ್ಟು ಖಲೀಲ್ ಎಸ್ಕೇಪ್ ಆಗಿದ್ದು, ಈ ಹಿನ್ನಲೆ ಖಲೀಲ್ ಮನೆಯವರು ಆಸಿಯಾಳನ್ನು ಮನೆಯಿಂದ ಹೊರಗೆ ಹಾಕಿದ್ದರು.

ಇಬ್ರಾಹಿಂ ತನೆಗೆ ಮೋಸ ಮಾಡಿದ್ದಾನೆಂದು ಆರೋಪಿಸಿರುವ ನೊಂದ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಕ್ಕೆ ಬಂದು ಪ್ರತಿಭಟನೆ ನಡೆಸಿದ್ದರು. ಈ ಘಟನೆ ಸುಮಾರು ಒಂದು ತಿಂಗಳು ಹಗ್ಗಜಗ್ಗಾಟದಲ್ಲಿ ಮುಂದುವರಿದು ಬಳಿಕ ನ್ಯಾಯಾಲಯದ ಮೆಟ್ಟಿಲೇರಿ ತಣ್ಣಗಾಗಿತ್ತು.
ಆಸಿಯಾ – ಖಲೀಲ್ ಕಟ್ಟೆಕಾರ್ ಪ್ರಕರಣವನ್ನು ಶಮನಗೊಳಿಸಲು ಜಿಲ್ಲಾ ಮುಸ್ಲಿಂ ಒಕ್ಕೂಟ , ಮುಸ್ಲಿಂ ಸಂಘಟನೆಗಳು ಮತ್ತು ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 1 ರಂದು ಸಭೆ ಸೇರಿ , ಖಲೀಲ್‌ರ ತಂದೆ ಅಬ್ದುಲ್ಲರೂ ಸೇರಿದಂತೆ ಕುಟುಂಬಸ್ಥರನ್ನು ಕರೆಸಿ ದೀರ್ಘ ಸಭೆಯನ್ನು ನಡೆಸಿ ಡಿಸೆಂಬರ್ 9ರಂದು ಖಲೀಲ್‌ನನ್ನು ಸುಳ್ಯದ ಸಂಧಾನ ಸಭೆಗೆ ಕರೆತರುವಂತೆ ಅವರ ತಂದೆಗೆ ನಿರ್ದೇಶನವನ್ನು ನೀಡಲಾಗಿತ್ತು.
ಇದಕ್ಕೆ ಅವರು ಒಪ್ಪಿದ್ದರು. ಸಭೆಗೆ ಖಲೀಲ್ ಬಾರದ ಕಾರಣ ಅಂತಿಮ ನಿರ್ಣಯವನ್ನು ಮಂಡಿಸಿ ಪ್ರಕರಣಕ್ಕೆ ಸುಖಾಂತ್ಯಗೊಳಿಸಲು ಮುಸ್ಲಿಂ ಮುಖಂಡರಿಗೆ ಸಾಧ್ಯವಾಗಲಿಲ್ಲ. ಖಲೀಲ್ ಬರುವವರೆಗೆ ಆಸಿಯಾರನ್ನು ಅಬ್ದುಲ್ಲರವರು ಅವರ ಮನೆಗೆ ಕರೆದುಕೊಂಡು ಹೋಗಬೇಕೆಂದು ಜಮಾಯತ್ ಕಮಿಟಿ ಹೇಳಿದುದನ್ನು ತಂದೆ ಅಬ್ದುಲ್ಲರು ಮತ್ತು ಅವರ ಇನ್ನೊಬ್ಬ ಮಗ ಶಿಹಾಬ್‌ರವರು ಒಪ್ಪಲಿಲ್ಲ ಎನ್ನಲಾಗಿದೆ.
ಇದೀಗ ತನಗೆ ಹೀಗೆ ಇದ್ದರೆ ನ್ಯಾಯ ದೊರಕುವುದಿಲ್ಲ ಎಂದು ಅರಿವಾಗಿ ಆಸಿಯಾ ಸುಳ್ಯ ಗಾಂಧಿನಗರದ ಕಟ್ಟೆಕಾರ್ ಫೂಟ್‌ವೇರ್ ಮಳಿಗೆಗೆ ಆಗಮಿಸಿದ್ದು, ಮಳಿಗೆಯಲ್ಲೇ ಕುಳಿತಿದ್ದಾರೆ. ತನ್ನ ಗಂಡ ಖಲೀಲ್ ಅಂಗಡಿಗೆ ಬಂದು ತನ್ನನ್ನು ಭೇಟಿಯಾಗುವವರೆಗೆ ಇಲ್ಲೇ ಇರುವುದಾಗಿ ಹೇಳುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಅಶ್ರಫ್ ರವರು ಒಬ್ಬ ಹಿಂದೂ ಧರ್ಮದ ಮಹಿಳೆ ಮುಸ್ಲಿಂ ಧರ್ಮಕ್ಕೆ ಬಂದು ನಡುಬೀದಿಯಲ್ಲಿ ಬಿದ್ದಾಗ ಅವಳಿಗೆ ನ್ಯಾಯ ಕೊಡಿಸುವುದು ನಮ್ಮ ಧರ್ಮವಾಗಿದೆ. ಖಲೀಲ್ ಇವರನ್ನು ಮದುವೆ ಮಾಡಿಕೊಂಡು ಈಗ ಸಂಪರ್ಕಕ್ಕೆ ಸಿಗದೇ ಇರುವುದರಲ್ಲಿ ಅರ್ಥವಿಲ್ಲ. ಇದರಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕಪ್ಪುಚುಕ್ಕೆ ಆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ಹಲವಾರು ಬಾರಿ ಶ್ರಮಿಸಿದೆವು. ಆದರೆ ಖಲೀಲ್ ರವರ ಭಾಗದಿಂದ ಯಾವುದೇ ಸ್ಪಂದನೆ ಸಿಗದ ಕಾರಣ ಘಟನೆಯು ಬೆಳೆಯುತ್ತಾ ಬರುತ್ತಿದೆ. ಅತೀ ಶೀಘ್ರದಲ್ಲಿ ಈ ವಿಷಯ ಸುಖಾಂತ್ಯಗೊಂಡ ಅವರಿಬ್ಬರು ಶಾಂತಿಯಿಂದ ಕೂಡಿ ಬಾಳುವ ಅವಕಾಶ ಬರುತ್ತದೆ ಎಂಬ ವಿಶ್ವಾಸ ನಮ್ಮಲ್ಲಿ ಇದೆ ಎಂದು ಹೇಳಿದರು .