DAKSHINA KANNADA
ಸೆ.21ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ
ಸೆಪ್ಟೆಂಬರ್ 21ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ
ಮಂಗಳೂರು,ಸೆಪ್ಟಂಬರ್ 18: ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಇದೇ ಸೆಪ್ಟೆಂಬರ್ 21ರಂದು ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಕುದ್ರೋಳಿ ದೇವಸ್ಥಾನ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಮಾಹಿತಿ ನೀಡಿದರು.
1990 ರಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಅದ್ಧೂರಿ ನವರಾತ್ರಿ ಉತ್ಸವ ನಡೆದು ಬಂದಿದೆ. ಶ್ರೀ ಕ್ಷೇತ್ರದ ದಸರಾ ಹಬ್ಬವೆಂದರೆ ಮಂಗಳೂರು ದಸರಾ ಎಂದೇ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ. ಈ ಬಾರಿಯ ದಸರಾ ಸಿದ್ಧತೆ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಭರದಿಂದ ಸಾಗಿದೆ. ರಾಷ್ಟ್ರಮಟ್ಟದಲ್ಲಿ ಎದ್ದು ಕಾಣುವಂತೆ ಈ ಬಾರಿ ದಸರಾ ಮೆರವಣಿಗೆ ಮಾಡಲಾಗುವುದೆಂದು ಅವರು ತಿಳಿಸಿದರು. ಇದೇ ಬರುವ ಸೆಪ್ಟೆಂಬರ್ 21 ರಂದು ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ ಎಂದು ಅವರು ತಿಳಿಸಿದರು.
ಈ ಬಾರಿ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರದ ಸಚಿವರೊಬ್ಬರು ಚಾಲನೆ ನೀಡಲಿದ್ದಾರೆ ಎಂದು ಹೇಳಿದ ಅವರು ಸಚಿವರ ಹೆಸರು ಬಹಿರಂಗಪಡಿಸಲು ನಿರಾಕರಿಸಿದರು .
ಸೆಪ್ಟೆಂಬರ್ 30 ರಂದು ಸಂಜೆ ಶ್ರೀ ಕ್ಷೇತ್ರದಿಂದ ಮಂಗಳೂರು ದಸರಾ ಮೆರವಣಿಗೆ ಹೊರಡಲಿದ್ದು ಶಾರದಾ ಮಾತೆ ,ಮಹಾಗಣಪತಿ ,ನವದುರ್ಗೆಯರ ಮೂರ್ತಿ ಸಹಿತ ರಾಜ್ಯದ ವಿವಿಧ ಭಾಗಳಿಂದ ಬರುವ 75 ಕ್ಕೂ ಅಧಿಕ ಕಲಾ ಪ್ರಕಾರಗಳು ಹಾಗೂ ಸ್ತಬ್ಧಚಿತ್ರಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದು ಅವರು ಹೇಳಿದರು.
.