LATEST NEWS
ಮಂಗಳೂರು ವಿವಾದಾತ್ಮಕ ಗೋಡೆ ಬರಹ…ಪೊಲೀಸರಿಗೆ ತಲೆ ನೋವಾದ ಸಿಸಿಟಿವಿ ಗಳು
ಮಂಗಳೂರು ಡಿಸೆಂಬರ್ 1: ಮಂಗಳೂರು ನಗರದ ಹೃದಯಭಾಗದಲ್ಲೇ ಎರಡು ಕಡೆಗಳಲ್ಲಿ ವಿವಾದಿತ ಗೋಡೆ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಆರೋಪಿಗಳ ಯಾವುದೇ ಸುಳಿವು ಸಿಗದೇ ಇರುವುದು ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ.
ನಗರದ ಎರಡು ಕಡೆಗಳಲ್ಲಿ ವಿವಾದಿತ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳು ಅಸ್ಪಷ್ಟವಾಗಿರುವುದರಿಂದ ತನಿಖೆಗೆ ತೊಡಕಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ಕದ್ರಿಯ ಅಪಾರ್ಟ್‌ಮೆಂಟ್ ಗೋಡೆಯ ಮೇಲೆ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗೋಡೆಬರಹ ಬರೆದಿರುವ ಆರೋಪಿಗಳು ತಮ್ಮ ಕೆಲಸವಾಗುತ್ತಲೇ ನಗರದಿಂದ ಜಾಗ ಖಾಲಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
ಗೋಡೆಬರಹ ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿರುವುದು, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ ಅಸ್ಪಷ್ಟವಾಗಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ನಗರದಾದ್ಯಂತ ಹಲವು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪಡೆದು, ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಮಂಗಳೂರಿನ ಸಿಸಿಟಿವಿ ವ್ಯವಸ್ಥೆ ಟ್ರೋಲ್ ಆಗಿದ್ದು, ನಮ್ಮೂರಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವಾಗ ಕ್ಯಾಮರಾ ವರ್ಕ್ ಆಗಿರುವುದಿಲ್ಲ, ಪೊಲೀಸ್ ಸ್ಟೇಷನ್ ಗೆ ದಾಳಿ ಮಾಡುವಾಗ ಕ್ಯಾಮರಾ ವರ್ಕ್ ಆಗಿರುವುದಿಲ್ಲ, ಗೋಡೆ ಮೇಲೆ ದುಷ್ಕರ್ಮಿಗಳು ಗೀಚುವಾಗಲೂ ಕ್ಯಾಮರಾ ವರ್ಕ್ ಆಗಿರುವುದಿಲ್ಲ . ಆದರೆ ಬೈಕ್ ನಲ್ಲಿ ಹಿಂದೆ ಕೂತವ ಹೆಲ್ಮೆಟ್ ಹಾಕದಿದ್ರೆ ಮಾತ್ರ ಮನೆಗೆ ನೋಟಿಸ್ ಬರುತ್ತೆ ಎಂದು ಪೊಲೀಸ್ ವ್ಯವಸ್ಥೆಯನ್ನು ಟ್ರೋಲ್ ಮಾಡಿದ್ದಾರೆ.