Connect with us

LATEST NEWS

ಮಾರ್ಚ್ ತಿಂಗಳ ಅಂತ್ಯದೊಳಗೆ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ಸಂಚಾರ ಸಂಸದ ಕ್ಯಾ. ಚೌಟ

ನವದೆಹಲಿ ಮಾರ್ಚ್ 13 : ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದು, ರೈಲ್ವೆ ಸಚಿವ ವಿ. ಸೋಮಣ್ಣ ಅವರ ದಿನಾಂಕ ನಿಗದಿಪಡಿಸಿಕೊಂಡು ಮಾರ್ಚ್‌ ಅಂತ್ಯದೊಳಗೆ ಈ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಇಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಕ್ಯಾ. ಚೌಟ ಅವರು, ಕಳೆದ ಒಂದು ದಶಕದಿಂದ ಬೇಡಿಕೆ ಉಳಿದಿದ್ದ ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯ ರಸ್ತೆಗೆ ವಿಸ್ತರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವ ರೈಲ್ವೆ ಸಚಿವಾಲಯದ ಕ್ರಮವನ್ನು ಶ್ಲಾಘಿಸಿ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲೆ ಜನತೆಯ ಪರವಾಗಿ ವಿಶೇಷ ಧನ್ಯವಾದವನ್ನು ಸಲ್ಲಿಸಿದ್ದಾರೆ. ಜತೆಗೆ ರೈಲ್ವೆ ಮಂಡಳಿ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ಅಧಿಕಾರಿಗಳಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಸಂಸದನಾದ ಕೂಡಲೇ ಕರಾವಳಿಯ ರೈಲು ಪ್ರಯಾಣಿಕರ ಈ ಬಹುವರ್ಷಗಳ ರೈಲ್ವೆ ಬೇಡಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಆ ಬಳಿಕ ಸಚಿವಾಲಯ ಹಾಗೂ ರೈಲ್ವೆ ಅಧಿಕಾರಿಗಳ ಜತೆ ನಿರಂತರ ಫಾಲೋಅಪ್‌ ಮಾಡಿರುವುದರ ಪರಿಣಾಮ ಜಿಲ್ಲೆಯ ಜನತೆಯ ದಶಕದ ಕನಸು ನನಸಾಗುವ ದಿನಗಳು ಹತ್ತಿರವಾಗಿದೆ. ಈ ರೈಲಿಗೆ ಹಸಿರುನಿಶಾನೆ ತೋರುವ ಬಗ್ಗೆ ಸಚಿವ ಸೋಮಣ್ಣ ಅವರೊಂದಿಗೆ ನಾನು ಚರ್ಚಿಸಿದ್ದು, ಉದ್ಘಾಟನೆಗೆ ಅವರ ಸಮಯ ನಿಗದಿಯಾಗುತ್ತಿದ್ದಂತೆ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಈ ರೈಲು ಸೇವೆ ಪ್ರಾರಂಭವಾಗಲಿದೆ ಎಂದು ಸಂಸದ ಕ್ಯಾ. ಚೌಟ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *