LATEST NEWS
ಮಂಗಳೂರು – ಬಾಡಿಗೆ ವಿಚಾರಕ್ಕೆ ಯುವಕನ ಕೊಲೆಗೆ ಯತ್ನ

ಮಂಗಳೂರು ಅಗಸ್ಟ್ 13: ರೌಡಿಗಳಿಗೆ ಮನೆ ನೀಡಬೇಡಿ ಎಂದು ಹೇಳಿದ್ದಕ್ಕೆ ಯುವಕನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ಶನಿವಾರ ತಡರಾತ್ರಿ ವೇಳೆ ನಡೆದಿದೆ. ನೆತ್ತಿಲಪದವು ನಿವಾಸಿ ಮನ್ಸೂರ್(40) ಹಲ್ಲೆಗೆ ಒಳಗಾದವರು. ಉಳ್ಳಾಲ ಕೋಟೆಪುರ ನಿವಾಸಿ ನಮೀರ್ ಹಂಝ ಕೊಲೆಗೆ ಯತ್ನಿಸಿದ ಆರೋಪಿಯಾಗಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಮೀರ್ ಹಂಝ ತನ್ನ ಸಹೋದರನಿಗೆ ಬಾಡಿಗೆ ಮನೆಗೆ ಕೊಡಿಸಲೆಂದು ನೆತ್ತಿಲಪದವು ಬಳಿಯಿರುವ ಮನ್ಸೂರ್ ಸಂಬಂಧಿಕರಿಗೆ ಸೇರಿದ ಮನೆಗೆ ಬಂದಿದ್ದ. ಆದರೆ ಅವರಿಗೆ ಬಾಡಿಗೆಗೆ ಮನೆ ನೀಡುವುದಕ್ಕೆ ಮನ್ಸೂರ್ ಆಕ್ಷೇಪ ವ್ಯಕ್ತಪಡಿಸಿದ್ದು, ರೌಡಿಗಳಿಗೆ ಮನೆ ನೀಡದಂತೆ ಮನೆಯವರಿಗೆ ಹೇಳಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಮನ್ಸೂರ್ ಹಾಗೂ ನಮೀರ್ ಹಂಝ ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟಕ್ಕೂ ಕಾರಣವಾಯಿತೆನ್ನಲಾಗಿದೆ. ಇದೇ ದ್ವೇಷದಲ್ಲಿ ನಮೀರ್ ಕತ್ತಿಯಿಂದ ಮನ್ಸೂರ್ ಕೈಗೆ ಕಡಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
