LATEST NEWS
ಮಂಗಳೂರು – ಸೌಜನ್ಯ ಹೋರಾಟ ಗೃಹ ಸಚಿವರ ಮನೆ ಬಾಗಿಲಿಗೂ ತಲುಪಬಹುದು….!!
ಮಂಗಳೂರು ಅಗಸ್ಟ್ 20 : ಸೌಜನ್ಯ ಪ್ರಕರಣದ ತನಿಖ ಮುಗಿದ ಅಧ್ಯಾಯ ಇನ್ನು ತನಿಖೆ ಸಾಧ್ಯವಿಲ್ಲ ಎಂದ ಗೃಹ ಸಚಿವರ ಜಿ. ಪರಮೇಶ್ವರಿಗೆ ನಿಮ್ಮ ಕುಟುಂಬದ ಹೆಣ್ಣುಮಕ್ಕಳಿಗೆ ಇಂಥ ಸ್ಥಿತಿ ಎದುರಾಗುತ್ತಿದ್ದರೆ ಇಂತಹದ್ದೇ ಹೇಳಿಕೆ ನೀಡುವಿರಾ’ ಎಂದು ಸೌಜನ್ಯ ಹೋರಾಟ ಸಮಿತಿ ಮುಖಂಡ ಮಹೇಶ್ ಶೆಟ್ಟಿ ತಮರೋಡಿ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದಲ್ಲಿ 11 ವರ್ಷಗಳ ಹಿಂದೆ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ಸೌಜನ್ಯಾ ಹೋರಾಟ ಸಮಿತಿಯ ಮಂಗಳೂರು ಘಟಕದ ಆಶ್ರಯದಲ್ಲಿ ಇಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದ ಅವರು ಸೌಜನ್ಯಾಗೆ ನ್ಯಾಯ ಕೊಡಿಸಲು ರಾಜ್ಯದಾದ್ಯಂತ ನಡೆಯುತ್ತಿರುವ ಹೋರಾಟ ನಾಲ್ಕು ದಿನಗಳಿಗೆ ಸೀಮಿತ ಎಂದು ಭಾವಿಸಬೇಡಿ. ಒಂದು ದಿನ ರಾಜ್ಯದ ಗೃಹ ಸಚಿವರ ಮನೆ ಬಾಗಿಲಿಗೂ ಈ ಹೋರಾಟ ತಲುಪಬಹುದು’ ಎಂದು ಸೌಜನ್ಯಾ ಹೋರಾಟ ಸಮಿತಿಯ ಮುಖಂಡ ಮಹೇಶ ಶೆಟ್ಟಿ ತಿಮರೋಡಿ ಎಚ್ಚರಿಸಿದರು.
11 ವರ್ಷ ಶಾಂತಿಯುತ ಹೋರಾಟ ನಡೆಸಿದೆವು. ಮುಂದಿನ ಹೋರಾಟ ಇದೇ ರೀತಿ ಇರುವುದಿಲ್ಲ. ಪೇಟಧಾರಿಗಳನ್ನೂ ಬಿಡುವುದಿಲ್ಲ. ಅಗತ್ಯ ಬಿದ್ದರೆ ನಿಮ್ಮ ಮನೆಗೆ ನುಗ್ಗಲೂ ಹಿಂಜರಿಯುವುದಿಲ್ಲ’ ಎಂದರು.
ಸೌಜನ್ಯಾ ತಾಯಿ ಕುಸುಮಾವತಿ ಗೌಡ ವೇದಿಕೆಯಲ್ಲೇ ಅಡ್ಡಬಿದ್ದು ನಮಸ್ಕರಿಸಿ ‘ಮಗಳಿಗೆ ನ್ಯಾಯಕೊಡಿಸಿ’ ಎಂದು ಕಣ್ಣೀರಿಟ್ಟು ಅಂಗಲಾಚಿದರು.