LATEST NEWS
ಮಂಗಳೂರು ಸ್ಮಾರ್ಟ್ ಸಿಟಿ ಎಂಜಿನಿಯರ್ ಗಳ ಎಡವಟ್ಟು ..ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಟೋ….!!
ಮಂಗಳೂರು ಜುಲೈ 05: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಎಡವಟ್ಟುಗಳ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಮಗಾರಿ ಯೋಜನೆ ರೂಪಿಸಿದ ಸ್ಮಾರ್ಟ್ ಎಂಜಿನಿಯರ್ ಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಂಗಳೂರು ನಗರದ ಪ್ರಮುಖ ಪಿವಿಎಸ್ ಜಂಕ್ಷನ್ ಸಮೀಪ ಎಲೆಕ್ಟ್ರಿಕ್ ಕಂಬವನ್ನು ತೆಗೆಯದೇ ಹಾಗೆಯೇ ಪುಟ್ ಪಾತ್ ನಿರ್ಮಿಸಿದ್ದು, ಜನರು ಪುಟ್ ಪಾತ್ ಮೇಲೆ ತೆರಳಬೇಕಾದರೆ ನುಸುಳಿಕೊಂಡ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಜೈಲ್ ರೋಡ್‌ನಲ್ಲಿ ಎಲೆಕ್ಟಿಕ್ ಕಂಬವನ್ನು ತೆರವು ಮಾಡದರೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದಾರೆ. ವಾಹನ ಸವಾರರು ಎಲೆಕ್ಟ್ರಿಕ್ ಕಂಬವನ್ನು ತಪ್ಪಿಸಿಕೊಂಡು ಸಾಗಬೇಕಾದ ಪರಿಸ್ಥಿತಿ ಇದೆ.
ಹಂಪನಕಟ್ಟೆಯಲ್ಲಿ ರಸ್ತೆಗೆ ಝೀಬ್ರಾ ಕ್ರಾಸಿಂಗ್ ಹಾಕಲಾಗಿದ್ದು, ಅದರ ಒ೦ದು ಬದಿ ರೇಲಿಂಗ್ ಹಾಕಲಾಗಿದ್ದು ಪಾದಚಾರಿ ಗಳು ಇದನ್ನು ಬಳಕೆ ಮಾಡಲು ರೆಲಿಂಗ್ ಹಾರಿ ಹೋಗ ಬೇಕಾದ ಪರಿಸ್ಥಿತಿ ಇತ್ತು, ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ವೈರಲ್ ಆದ ಬಳಿಕ ಇದೀಗ ರೇಲಿಂಗ್ ನ್ನು ತೆಗೆದು ಹಾಕಿದ್ದಾರೆ.
ಇನ್ನು ಗುಣಮಟ್ಟದ ಕಾಂಕ್ರೀಟ್ ರಸ್ತೆಯನ್ನು ತೆಗೆದು ಅದರ ನಡುವಿನಲ್ಲಿ ಡಾಮರು ಹಾಕಿರುವ ಘಟನೆ ಕೊಡಿಯಾಲ್ ಬೈಲ್ ನಲ್ಲಿ ನಡೆದಿದ್ದು, ಯುಜಿಡಿ ಕಾಮಗಾರಿಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕಾಂಕ್ರಿಟ್ ರಸ್ತೆಯನ್ನು ನಡುವಿನಲ್ಲೇ ತೆಗೆದು ಹಾಕಲಾಗಿದೆ. ಈ ರಸ್ತೆಯಲ್ಲಿ ಕಾಂಕ್ರೀಟ್ ಮಧ್ಯೆ ತಾತ್ಕಾಲಿಕವಾಗಿ ಡಾಮರು ಹಾಕಲಾಗಿದೆ. ಆದರೆ ಈ ಕಾಮಗಾರಿಯೂ ಕಳಪೆಯಾಗಿದ್ದು ಡಾಮರು ಎದ್ದು ಜಲ್ಲಿ ಒಂದೇ ದಿನದಲ್ಲಿ ಚೆಲ್ಲಾಪಿಲ್ಲಿಯಾಗಲು ಆರಂಭವಾಗಿದೆ.
ನಗರದಲ್ಲಿ ಬಹುತೇಕ ರಸ್ತೆಗಳ ಕಾಂಕ್ರೀಟಿಕರಣ ನಡೆಯುತ್ತಿದ್ದು, ವಾಹನಗಳ ಪಾರ್ಕಿಂಗ್ ಗೆ ಜಾಗ ಇಲ್ಲದ ಕಾರಣ ಬಹುತೇಕ ವಾಹನಗಳು ರಸ್ತೆಯ ಮೇಲೆ ನಿಲ್ಲುತ್ತಿವೆ. ಕೊನೆಗೆ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸಲು ಆಗದ ಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ಸ್ಮಾರ್ಟ್ ಸಿಟಿಯ ಹೊಸ ಹೊಸ ಐಡಿಯಾಗಳ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬುದ್ದಿವಂತರ ಜಿಲ್ಲೆಗೆ ಮುಜುಗರ ತರುವಂತಾಗಿದೆ.