LATEST NEWS
ಲಾಕ್ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ಓಪನ್ – ಬೀಗ ಜಡಿದು ಪರವಾನಿಗೆ ರದ್ದು ಮಾಡಿದ ಪಾಲಿಕೆ ಅಧಿಕಾರಿಗಳು
ಮಂಗಳೂರು: ಲಾಕ್ ಡೌನ್ ನಡುವೆ ಅಂಗಡಿ ತೆರೆದು ವ್ಯವಹಾರ ನಡೆಸುತ್ತಿದ್ದಜ ಹಲವು ಅಂಗಡಿಗಳಿಗೆ ಮಂಗಳೂರು ಪಾಲಿಕೆ ಅಧಿಕಾರಿಗಳು ದಂಡ ವಿಧಿಸಿ ಬೀಗ ಜಡಿದಿದ್ದಾರೆ.
ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ಅಗತ್ಯ ವಸ್ತುಗಳ ಅಂಗಡಿ ಅಲ್ಲದೆ ಇರುವ ಅಂಗಡಿಗಳನ್ನು ಅನಧಿಕೃತವಾಗಿ ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ, ಹಲವು ಅಂಗಡಿಗಳ ಪರವಾನಿಗೆ ರದ್ದುಗೊಳಿಸಿದ್ದು, ಇನ್ನೂ ಹಲವು ಅಂಗಡಿಗಳಿಗೆ ದಂಡ ವಿಧಿಸಿದ್ದಾರೆ.
ಇಂದು ಪಾಲಿಕೆಯಿಂದ ವಿವಿಧ ತಂಡಗಳ ಮೂಲಕ ನಡೆಸಲಾದ ಕಾರ್ಯಾಚರಣೆಯ ವೇಳೆ ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ 78 ಅಂಗಡಿಗಳಿಗೆ 68,350 ರೂ. ದಂಡ ವಿಧಿಸಿ, ಈ ಪೈಕಿ 30 ಅಂಗಡಿಗಳ ಉದ್ದಿಮೆ ಪರವಾನಿಗೆಯನ್ನು ರದ್ದುಗೊಳಿಸಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಮುಚ್ಚಲಾಗಿದೆ. ಬೆಳಗ್ಗೆ 10 ಗಂಟೆಯ ಬಳಿಕ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಾರ್ವಜನಿಕರು ಅನಗತ್ಯ ಓಡಾಟ ಮಾಡಿದ 19 ಪ್ರಕರಣಗಳಿಗೆ 8,050 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.