DAKSHINA KANNADA
ಮಂಗಳೂರು ರಸ್ತೆಯಲ್ಲಿದೆ ಪಾತಾಳಕ್ಕೆ ದಾರಿ, ಮನಪಾ ಮರೆಯಿತೇ ದುರಸ್ತಿ ಜವಾಬ್ದಾರಿ
ಮಂಗಳೂರು ರಸ್ತೆಯಲ್ಲಿದೆ ಪಾತಾಳಕ್ಕೆ ದಾರಿ, ಮನಪಾ ಮರೆಯಿತೇ ದುರಸ್ತಿ ಜವಾಬ್ದಾರಿ
ಮಂಗಳೂರು,ನವಂಬರ್ 15: ಚರಂಡಿ ದುರಸ್ಥಿಯ ಕಾರಣದಿಂದ ಸುಮಾರು ಒಂದು ತಿಂಗಳ ಕಾಲ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದ ಪಂಪುವೆಲ್ – ಬೆಂದೂರುವೆಲ್ ಸಂಪರ್ಕ ರಸ್ತೆಯಲ್ಲಿ ಮತ್ತೆ ರಕ್ಕಸ ಗುಂಡಿಗಳ ನಿರ್ಮಾಣವಾಗಿದೆ. ಪಂಪುವೆಲ್ ಸಮೀಪ ಚರಂಡಿ ದುರಸ್ಥಿಗೊಳಿಸಿದ ಬಳಿಕ ರಸ್ತೆಯನ್ನು ಸರಿಪಡಿಸದ ಕಾರಣ ಇದೀಗ ದುರಸ್ತಿಪಡಿಸಿದ ಮ್ಯಾನ್ ಹೋಲ್ ಬಳಿ ರಕ್ಕಸ ಗುಂಡಿಗಳು ನಿರ್ಮಾಣಗೊಂಡಿವೆ. ಈ ಗುಂಡಿಗಳು ಎಷ್ಟು ಆಳವಾಗಿವೆಯೆಂದರೆ ಒಂದು ವೇಳೆ ಮಹಾನಗರ ಪಾಲಿಕೆ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದೇ ಆದರೆ ಈ ರಸ್ತೆಯಲ್ಲಿ ಸಂಚರಿಸು ದೊಡ್ಡ ವಾಹನಗಳೂ ಗುಂಡಿಯೊಳಗೆ ಬೀಳುವ ದಿನಗಳು ಮಾತ್ರ ದೂರವಿಲ್ಲ. ಕಳೆದ ಸುಮಾರು ಒಂದು ತಿಂಗಳಿನಿಂದ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಪ್ರಯಾಣಿಕರಿಗೆ ಧೂಳು ಭಾಗ್ಯವನ್ನು ಮಹಾನಗರ ಪಾಲಿಕೆ ನೀಡಿದೆ. ಮ್ಯಾನ ಹೋಲ್ ಕಾಮಗಾರಿಯ ಬಳಿಕ ರಸ್ತೆಯನ್ನು ಹಾಗೆಯೇ ಬಿಟ್ಟು ಹೋಗಿರುವ ಕಾಮಗಾರಿ ವಹಿಸಿರುವ ಗುತ್ತಿಗೆದಾರನ ಬೇಜಾವಾಬ್ದಾರಿಯಿಂದಾಗಿ ಇದೀಗ ಪಾತಾಳಕ್ಕೆ ದಾರಿಯಂತಿರುವ ಗುಂಡಿಗಳ ನಿರ್ಮಾಣವಾಗಿದೆ. ಪಂಪುವೆಲ್ ನಿಂದ ಬೆಂದೂರುವೆಲ್ ಸಂಪರ್ಕಿಸುವ ಈ ರಸ್ತೆಯ ದುರಸ್ತಿ ನಡೆಸಬೇಕೆಂದು ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ ಬಳಿಕ ನಿದ್ದೆಯಿಂದೆದ್ದ ಮಹಾನಗರ ಪಾಲಿಕೆ ರಸ್ತೆಗೆ ತೇಪೆ ಹಚ್ಚಿ ಸದ್ಯದ ಮಟ್ಟಿಗೆ ರಸ್ತೆಯಲ್ಲಿ ಸಂಚರಿಸುವಂತಹ ವ್ಯವಸ್ಥೆಯನ್ನು ಮಾಡಿತ್ತು. ಆದರೆ ಇದೀಗ ಮತ್ತೆ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯ ತಲೆಎತ್ತಿವೆ. ಈ ಹಿಂದೆ ಮಳೆಯ ಕಾರಣ ಹೇಳಿ ಕಾಮಗಾರಿಯನ್ನು ಮುಂದೆ ಹಾಕುತ್ತಿದ್ದ ಮಂಗಳೂರು ಮೇಯರ್ ಗೆ ಮಂಗಳೂರಿನಲ್ಲಿ ಮಳೆ ಹೋಗಿ ತಿಂಗಳು ಕಳೆದರೂ ಗೊತ್ತಾಗಲಿಲ್ಲವೇ ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಮಂಗಳೂರಿನ ಈಗಿನ ಪರಿಸ್ಥಿತಿಯನ್ನು ನೋಡುವಾಗ ಮಹಾನಗರ ಪಾಲಿಕೆಯಲ್ಲಿ ಅಗತ್ಯ ಕಾಮಗಾರಿಗಳ ನಿರ್ವಹಣೆಗೂ ಹಣಕಾಸಿನ ತೊಡಗು ಎದುರಾಗಿದೆಯೋ ಎನ್ನುವ ಸಂಶಯ ಮೂಡುತ್ತಿದೆ. ಮಹಾನಗರ ಪಾಲಿಕೆಯ ತಿಜೋರಿ ದಿವಾಳಿಯಾಗಿರುವ ಕಾರಣಕ್ಕಾಗಿಯೇ ಮಂಗಳೂರು ಮೇಯರ್ ಇದೀಗ ನೀರಿನ ಬಿಲ್ ಸೇರಿದಂತೆ ಹಲವು ಮೂಲಗಳಿಂದ ಮಹಾನಗರ ಪಾಲಿಕೆಗೆ ಬರಬೇಕಾದ ಹಣದ ವಸೂಲಿಯಲ್ಲಿ ತೊಡಗಿಕೊಂಡಿದ್ದು, ಪಾಲಿಕೆ ದಿವಾಳಿಯಾಗಿದೆಯೇ ಎನ್ನುವ ಸಂಶಯವನ್ನೂ ಮೂಡಿಸುತ್ತಿದೆ. ಇಲ್ಲದೇ ಹೋದಲ್ಲಿ ಅತೀ ಜರೂರಾಗಿ ಆಗಬೇಕಾದ ರಸ್ತೆ ದುರಸ್ತಿ ಕಾಮಗಾರಿಗೆ ಇಷ್ಟೊಂದು ವಿಳಂಬ ಮಾಡಲು ಕಾರಣವೇನು ಎನ್ನುವುದನ್ನೂ ಪಾಲಿಕೆ ಸ್ಪಷ್ಟಪಡಿಸಬೇಕಿದೆ.