DAKSHINA KANNADA
ಮಂಗಳೂರು : ನಂತೂರು – ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನಿರ್ಣಯ..!
ಮಂಗಳೂರು : ಮಂಗಳೂರಿನ ನಂತೂರಿನಿಂದ ಸುರತ್ಕಲ್ ವರಗಿನ ರಾಷ್ಟ್ರೀಯ ಹೆದ್ದಾರಿ ವರ್ಷಗಳಿಂದ ಸಮಸ್ಯೆಯ ಆಗರವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹೊಂಡ ಗುಂಡಿಗಳು ಬಿದ್ದು ಪ್ರಯಾಣಿಕರ ಪಾಲಿಗೆ ಮಾರಣಾಂತಿಕವಾಗಿ ಮಾರ್ಪಟ್ಟಿದೆ. ಅಡ್ಡಾದಿಡ್ಡಿಯಾಗಿ, ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಈ ಹೆದ್ದಾರಿ ಪೂರ್ಣ ಪ್ರಮಾಣದ ದುರಸ್ತಿ ಕಾಣದೆ ಹಲವು ವರ್ಷಗಳು ಸಂದಿವೆ.
ಈ ಹೆದ್ದಾರಿಯಲ್ಲಿರುವ ಕೂಳೂರು ಹಳೆಯ ಸೇತುವೆ ಧಾರಣಾ ಸಾಮರ್ಥ್ಯ ಕಳೆದುಕೊಂಡು ಸಂಚಾರಕ್ಕೆ ಅನರ್ಹಗೊಂಡಿದೆ, ವಾಹನ ಸಂಚಾರ ನಿಷೇಧಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಏಳು ವರ್ಷ ಸಂದಿದೆ. ಈ ನಡುವೆ ಹೊಸ ಸೇತುವೆ ಕಾಮಗಾರಿಗೆ ಐದು ವರ್ಷಗಳು ದಾಟಿವೆ. ಈ ಐದು ವರ್ಷಗಳಲ್ಲಿ ಕನಿಷ್ಟ ಪಿಲ್ಲರ್ ಗಳನ್ನೂ ಪೂರ್ಣಗೊಳಿಸಲು ಹೆದ್ದಾರಿ ಪ್ರಾಧಿಕಾರಕ್ಕೆ ಸಾಧ್ಯವಾಗಿಲ್ಲ. ಅಷ್ಟು ಆಮೆ ಗತಿಯಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಕುಸಿಯು ಭೀತಿ ಎದುರಿಸುತ್ತಿರುವ ಹಳೆಯ ಸೇತುವೆಯಲ್ಲಿ ಅಪಾಯಕಾರಿಯಾಗಿ ವಾಹನಗಳು ಸಂಚರಿಸುತ್ತಿವೆ.
ಹಾಗೆಯೆ, ನಂತೂರು, ಕೆಪಿಟಿ ಜಂಕ್ಷನ್, ಪದುವಾ ಹೈ ಸ್ಕೂಲ್ ಬಳಿ ವಾಹನ ದಟ್ಟಣೆಯಿಂದ ಪ್ರತಿದಿನ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಜಂಕ್ಷನ್ ಗಳನ್ನು ದಾಟುವುದು ವಾಹನ ಸವಾರರ ಪಾಲಿಗೆ ನರಕ ಸದೃಶವಾಗಿದೆ. ಜನತೆಯ ಬಲವಾದ ಆಗ್ರಹದ ತರುವಾಯ ನಂತೂರು ಫ್ಲೈ ಓವರ್ ನಿರ್ಮಣಕ್ಕೆ ಬಹಳ ತಡವಾಗಿ ಹೆದ್ದಾರಿ ಪ್ರಾಧಿಕಾರ ಈಗ ಮುಂದಾಗಿದೆ. ಕಾಮಗಾರಿ ಆರಂಭಿಸಿದೆ.
ಮಂಗಳೂರು ಉಡುಪಿಯನ್ನು ಸಂಪರ್ಕಿಸುವ, ಕೇರಳ – ಮುಂಬೈ ಸಂಚಾರದ ಪ್ರಮುಖ ಕೊಂಡಿಯಾಗಿರುವ, ಮಂಗಳೂರು – ಉಡುಪಿ ನಡುವಿನ ಸಂಪರ್ಕದ ಅತ್ಯಂತ ಮಹತ್ವದ, ಅತಿ ಸಂಚಾರ ದಟ್ಟಣೆಯ ಈ ಹೆದ್ದಾರಿಯ ದುರವಸ್ಥೆ ಗಂಭೀರವಾದದ್ದು. ಕೂಳೂರು ಹಳೆಯ ಸೇತುವೆ ಕುಸಿದು ಬಿದ್ದಲ್ಲಿ ದೊಡ್ಡ ಬಿಕ್ಕಟ್ಟು ಎದುರಾಗಲಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಕುಳೂರು ಹೊಸ ಸೇತುವೆಯನ್ನು ತಕ್ಷಣ ಪೂರ್ಣಗೊಳಿಸಬೇಕು, ನಂತೂರು ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿ ಪಡಿಸಬೇಕು, ನಂತೂರು – ಸುರತ್ಕಲ್ ವರಗಿನ ರಸ್ತೆಯನ್ನು ಪೂರ್ಣಪ್ರಮಾಣದಲ್ಲಿ ದುರಸ್ತಿಗೊಳಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ ಮಂಗಳೂರು ನಗರ ಉತ್ತರ ಸಮ್ಮೇಳನ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.