DAKSHINA KANNADA
ಮಂಗಳೂರು: ಖ್ಯಾತ ಯುರೋಲಜಿಸ್ಟ್ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತಕ್ಕೆ ಬಲಿ..!
ಮಂಗಳೂರು: ಮಂಗಳೂರಿನ ಸುಪ್ರಸಿದ್ಧ ಮೂತ್ರಶಾಸ್ತ್ರದ ತಜ್ಞರು (ಯುರೋಲಜಿಸ್ಟ್) ಡಾ.ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನರಾಗಿದ್ದಾರೆ.
61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಶುಕ್ರವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೂರು ದಶಕಕ್ಕೂ ಅಧಿಕ ಅನುಭವ ಹೊಂದಿದ್ದ ಡಾ. ಜಿ ಜಿ ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. ಹಲವಾರು ಸಂಕೀರ್ಣ ವೈದ್ಯಕೀಯ ಪ್ರಕರಣಗಳನ್ನು ನಿರ್ವಹಿಸಿದ್ದ ಅವರು, ಯುರೊಲಿಥಿಯಾಸಿಸ್, ಆಂಡ್ರಾಲಜಿ, ಯುರೊಡೈನಾಮಿಕ್ಸ್, ರೆಕಾನ್-ಯೂರಾಲಜಿ, ಯುರೊಜಿನೆಕಾಲಜಿ ಮತ್ತು ಎಂಡೋರಾಲಜಿಯಲ್ಲಿ ಪರಿಣತಿಯನ್ನು ಹೊಂದಿದ್ದರು.ಡಾ.ಜಿ.ಜಿ. ಲಕ್ಷ್ಮಣ ಪ್ರಭು ಅವರ ಅಕಾಲಿಕ ನಿಧನಕ್ಕೆ ಅನೇಕ ಗಣ್ಯರು, ಹಿರಿಯ , ಕಿರಿಯ ವೈದ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.
ಜಿ ಜಿ ಲಕ್ಷ್ಮಣ್ ಪ್ರಭು ಅವರ ಲೇಖನಿಯಲ್ಲಿ ಮೂಡಿದ ಮಂಗಳೂರು ಬಗೆಗಿನ ಒಂದು ಸ್ವಾರಸ್ಯಕರ ಕವನ :
ಮಂಗ್ಳೂರು
ಬಾವುಟವಿಲ್ಲದ ಗುಡ್ಡೆ , ವೆಲ್ಲೇ ಇಲ್ಲದ ಬೆಂದೂರು
ಮಂಗನಿಲ್ಲದ ಸ್ಟಾಂಡು ಮೋರ್ಗನರ ಗೇಟಿಲ್ಲದ ನಮ್ಮೂರು
ಮಠ ಕಾಣದ ಬಲ್ಮಠ, ಲೇಡಿ ಕಾಣದ ಹಿಲ್ಲು ನೀರಿಲ್ಲದ ಫಲ್ನೀರು
ಕಟ್ಟೆ ಹುಡುಕಿ ಅಪ್ಪಣ್ಣನ ಬೇಕಾದರೆ ಬೆಲ್ಲ ಮತ್ತು ನೀರು
ಕಂಬಳ ಒಡದ ಕದ್ರಿ, ಎಮ್ಮೆ ಮೇಯದ ಕೆರೆ, ತಾವರೆ ಅರಳದ ಕೆರೆಯ ನೀರು
ಜೆಲ್ಲಿ ಸಿಗದ ಗುಡ್ಡೆ , ಶೇಡಿ ದೊರಕದ ಗುಡ್ಡೆ ಹಡಗು ಬಾರದ ಬಂದರು
ಚಾಡಿ ಇಲ್ಲದ ಕೊಂಚಾಡಿ ಕಲ್ಲು ಸಿಗದ ಕೋಡಿ, ನಿಲ್ಲಾಲಗದ ನಂತೂರು
ಬೊಕ್ಕ ತಿಕ್ಕಗ ಮೂಲು, ಬೊಕ್ಕಪಟ್ನ ಪುದಾರು, ಕಾಯ್ವಳು ಎಲ್ಲರ ಮಾತೆ ಮಿಲಾರು
ಸೀರೆ ಇಲ್ಲದ ಸಾರಿಪಳ್ಳ, ಹಸಿರಲ್ಲದ ಪಚ್ಚನಾಡಿ, ವಿಚಿತ್ರ ನಮ್ಮೂರು
ಜೋಕಿಲ್ಲದ ಜೋಕಟ್ಟೆ ಮಾರ್ನಮಿಗೆ ಇನ್ನೊಂದು ಮತ್ತೆ, ಎಲ್ಲೆಡೆ ಆಶ್ವತ್ತದ ಬೇರು
ಜಾಲದಲ್ಲಿ ಬಜಾಲು, ಮುಟ್ಟಲಾಗದ ಮಟ್ಟದಕಣಿ, ಆಳ ವಲ್ಲದ ಅಳಕೆ ಕುಂಟಿ ಹೋದರೂ ಕಾಣದ ಉರು
ತೊಕ್ಕೊಟ್ಟು ಇದ್ದರೂ ಬಿಕ್ಕಟ್ಟಿಲ್ಲ , ಅದಕ್ಕೆ ಅನ್ನುವರು ಹಾಯಾಗಿ ಇಲ್ಲೇ ತಳವೂರು
ಕಾವೇರದ ಕಾವೂರು, ಬೊಳಾಗಾದ ಬೋಳೂರು,
ಆಕಾಶದಲ್ಲಿಲದ ಭವನ, ನಗರದ ಹೊರಗಾಯ್ತು ಶಕ್ತಿ, ವಾಮನ ಮೆಟ್ಟದ ವಾಮಂಜೂರು
ಪಾಂಡವರು ನೋಡದ ಪಾಂಡೇಶ್ವರ, ಗೊಲ್ಲರಿಲ್ಲದ ಕೇರಿ, ಬಲ್ಲಾಳ್ ಬಾಗು ಬಲ್ಲವರ ಉರು
ಅತ್ತ ಪಡೆದ ವರ, ಕಟ್ಟೆಗಳಾ ನಗರ ರಕ್ಷಿಪ ಎಲ್ಲರ ಮಂಜುನಾಥ ದೇವರು
ಗದ್ದೆ ಇಲ್ಲದ ಕೇರಿ , ಅವಲಕ್ಕಿ ದೊರಕದ ಕೇರಿ, ಕಾಪಿ ಸಿಗದ ಕಾಡು ನೊಡದವರಾರು
ಬಯಲು ಇಲ್ಲದ ಕೊಡಿಯಾಲ ಪಂಪೇ ಇಲ್ಲದ ವೆಲ್ಲುಗಳ ಉರು
ಜೈ ಎನ್ನಲು ಬಿಜೈ, ಊರಲು ಉರ್ವ, ಹೊಯ್ಗೆ ಸಿಗದ ಬಜಾರು
ಆದರೂ ಸಜ್ಜನರ ತವರು, ತೇರಿಗೆ ಹೆಸರು, ತಾಯಿ ಮಂಗಳೆ ಕಾಯುವ ಮಂಗ್ಳೂರು
ಜಿ ಜಿ ಲಕ್ಷ್ಮಣ ಪ್ರಭು