DAKSHINA KANNADA
ಮಂಗಳೂರು : ಸರಕಾರಿ ಶಾಲೆಗಳ ಬಡ ಮಕ್ಕಳ ಆರೋಗ್ಯ ,ನೈರ್ಮಲ್ಯಕರಣಕ್ಕೆ ಧೃಡ ಸಂಕಲ್ಪ,’ ರಾಜಕೇಸರಿ ಟ್ರಸ್ಟ್’ ಗೊಂದು ಸಲಾಂ..!!

ಮಂಗಳೂರು : ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಬಡ ಮಕ್ಕಳ ಆರೋಗ್ಯ ,ನೈರ್ಮಲ್ಯ , ಮತ್ತು ಹಕ್ಕು ಸಂರಕ್ಷಣೆಯ ಹಿತದೃಷ್ಟಿಯಿಂದ ಯುವಪಡೆ ಧೃಡ ಸಂಕಲ್ಪ ಮಾಡಿದ್ದು ಸ್ವಚ್ಛಾಲಯ ಅಭಿಯಾನ – 2024 ಎಂಬ ವಿನೂತನ ಸ್ವಚ್ಚತಾ ಅಭಿಯಾನ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಆರಂಭಿಸಿದೆ.
ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ಶುಚಿತ್ವ ಮತ್ತು ದುರಸ್ತಿಗೊಳಿಸಿ ನವೀಕರಿಸಿ ಸ್ವಚ್ಛಾಲಯಗಳನ್ನಾಗಿ ಪರಿವರ್ತಿಸುವ ವಿನೂತನ ಪರಿಕಲ್ಪನೆಯೊಂದಿಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸರಿಸುಮಾರು 1000ಕ್ಕೂ ಹೆಚ್ಚಿನ ಎಲ್ಲಾ ಸರಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯಗಳನ್ನು “ಸ್ವಚ್ಛಾಲಯ”ಗಳನ್ನಾಗಿ ಪರಿವರ್ತಿಸುವ ಮೂಲಕ ಬಡಮಕ್ಕಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲು ನೆರವಾಗುವುದು ಈ ಅಭಿಯಾನದ ಸದುದ್ದೇಶವಾಗಿದೆ. ದಸರಾ ರಜಾದಿನಗಳಲ್ಲಿ ಈಗಾಗಲೇ ಹೊಯ್ಗೆಬಜಾರ್, ಸೂಟರ್ ಪೇಟೆ ಮತ್ತು ಕಾವೂರು ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛಾಲಯಗಳನ್ನಾಗಿ ಸಂಸ್ಥೆಯ ವತಿಯಿಂದ ಪರಿವರ್ತಿಸಲಾಗಿದೆ. 21-10-2024 ರ ಸೋಮವಾರದಂದು ಪರಿವರ್ತಿತ ಸ್ವಚ್ಚಾಲಯಗಳ ಉದ್ಘಾಟನಾ ಸಮಾರಂಭ ನಡೆಯಲಿದೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ನಮ್ಮ ಸಂಸ್ಥೆಯ ಸಂಸ್ಥಾಪಕಧ್ಯಕ್ಷರಾದ ಶ್ರೀ ದೀಪಕ್ ಜಿ ಬೆಳ್ತಂಗಡಿ, ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸ್ಥಳೀಯ ಕಾರ್ಪೊರೇಟರ್ ಗಳು, ಶಾಲೆಯ ಹಳೇ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕ ಪೋಷಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ.
