LATEST NEWS
ಮಳೆಗಾಲ ಹಿನ್ನಲೆ ಹೊಸ ನಿರ್ಮಾಣ ಕಾಮಗಾರಿಗಳಿಗೆ ಮಹಾನಗರಪಾಲಿಕೆ ನಿರ್ಬಂಧ
ಮಂಗಳೂರು ಮೇ 17: ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಆರಂಭವಾಗಲಿರುವ ಹಿನ್ನಲೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ನಿರ್ಬಂಧಿಸಿ ಪಾಲಿಕೆ ಆಯುಕ್ತರಾದ ಅಕ್ಷಯ್ ಶ್ರೀಧರ್ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಮೇ 19 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜೂನ್ ಮೊದಲ ವಾರದಲ್ಲೇ ಕರಾವಳಿಗೆ ಮಾನ್ಸೂನ್ ಕೂಡ ಆಗಮಿಸುವ ಸಾಧ್ಯತೆ ಹಿನ್ನಲೆ ಈ ನಿರ್ಬಂಧಗಳನ್ನು ಹೇರಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಳ್ಳದಂತೆ, ಮಳೆಗಾಲ ಪೂರ್ಣಗೊಂಡ ನಂತರ ಆ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಗುಡ್ಡ ಅಗೆದು ನಿವೇಶನ ಸಮತಟ್ಟು ಗೊಳಿಸುವುದರಿಂದ ಗುಡ್ಡ ಕುಸಿದು ಸಾರ್ವಜನಿಕರಿಗೆ ತೊಂದರೆಯಾಗಲಿದೆ, ಆದ ಕಾರಣ ಗುಡ್ಡ ಅಗೆದು ನಿವೇಶನವನ್ನು ಸಮತಟ್ಟುಗೊಳಿಸಿ ಮಣ್ಣು ಸಾಗಾಟ ಮಾಡುವುದನ್ನು ಈ ಸಂದರ್ಭದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮುಖ್ಯವಾಗಿ ಈಗಾಗಲೇ ಆರಂಭಿಸಿರುವ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಅಕ್ಕಪಕ್ಕದ ನಿವೇಶನಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸುವುದು ಮತ್ತು ತಗ್ಗು ಪ್ರದೇಶವಿರುವ ಸಂದರ್ಭದಲ್ಲಿ ಯಾವುದೇ ಅನಾಹುತವಾಗದ ಹಾಗೆ ತಡೆಗೋಡೆ ನಿರ್ಮಿಸಿ ಸೂಕ್ತ ರೀತಿಯಲ್ಲಿ ಭದ್ರಪಡಿಸಬೇಕು, ತಪ್ಪಿದಲ್ಲಿ ಕೆ.ಎಂ.ಸಿ ಕಾಯ್ದೆಯಂತೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.