ಮಂಗಳೂರು ಅಗಸ್ಟ್ 18: ಮಂಗಳೂರು ರೈಲ್ವೆ ನಿಲ್ದಾಣದಲ್ಲಿ 28.03 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ನೇತ್ರಾವತಿ ಕ್ಯಾಬಿನ್ ನಿಂದ ಮಂಗಳೂರು ಸೆಂಟ್ರಲ್ ವರೆಗಿನ  1.5 ಕಿ.ಮೀ ಉದ್ದದ ರೈಲ್ವೇ ಹಳಿ ದ್ವಿಪಥ ಕಾಮಗಾರಿಗೆ ರೈಲ್ವೆ ಸಚಿವ ಸುರೇಶ್ ಪ್ರಭಾಕರ್ ಪ್ರಭು ಶಂಕುಸ್ಥಾಪನೆ ನೆರವೇರಿಸಿದರು.
ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು .

ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ 90 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾದಚಾರಿ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದ ಸುರೇಶ್ ಪ್ರಭು ಈ ಬಾರಿ ಬಜೆಟ್ನಲ್ಲಿ ಕರ್ನಾಟಕಕ್ಕೆ 3174 ಕೋಟಿ ರೂಪಾಯಿಯ ಯೋಜನೆ ನೀಡಲಾಗಿದೆ ಎಂದು ಹೇಳಿದರು.

ಕರ್ನಾಟಕವನ್ನು ಫಾಸ್ಟ್ ಟ್ರ್ಯಾಕ್ ಸ್ಟೇಟ್ ಮಾಡುವ ನಿಟ್ಟಿನಲ್ಲಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು .ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ ಮೇಕ್ ಇನ್ ಇಂಡಿಯಾ ಮಾದರಿಯಲ್ಲೇ ರೈಲ್ವೆ ಇಲಾಖೆಗೆ ವೇಗ ಹಾಗೂ ಸೌಲಭ್ಯಕ್ಕೆ ಆದ್ಯತೆ ನೀಡಲಾಗುವುದು, ಈ ನಿಟ್ಟಿನಲ್ಲಿ ಕರ್ನಾಟಕವನ್ನು ಫಾಸ್ಟ್ ಟ್ರ್ಯಾಕ್ ಸ್ಟೇಟ್ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಮಂಗಳೂರು ವಿಶ್ವದರ್ಜೆ ರೈಲ್ವೆ ನಿಲ್ದಾಣ

ನಂತರ ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣವನ್ನು  ವಿಶ್ವ ದರ್ಜೆಗೇರಿದ ನಿಟ್ಟಿನಲ್ಲಿ ಪ್ರಕ್ರಿಯೆಗಳು ಆರಂಭಗೊಂಡಿದೆ ಎಂದು ಹೇಳಿದರು.

ವಿಶ್ವದರ್ಜೆಯ ರೈಲ್ವೆ ನಿಲ್ದಾಣವಾಗಿ ಪರಿವರ್ತಿಸಲು ಅಗತ್ಯವಿರುವ 100 ಎಕರೆ ಭೂಮಿಯ ಪೈಕಿ ಈಗಾಗಲೇ ರೈಲ್ವೆ ಇಲಾಖೆ 60 ಎಕರೆ ಭೂಮಿ ನೀಡಿದೆ ಉಳಿದ 40 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ನೀಡಬೇಕಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಅಗತ್ಯ ಭೂಮಿ ಒದಗಿಸಿದಲ್ಲಿ ಒಂದು ವರ್ಷದೊಳಗೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುವುದು ಎಂದು ಅವರು ತಿಳಿಸಿದರು .

ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ , ಪಾಲ್ಗಾಟ್ ಡಿಆರ್ ಎಂ ನರೇಶ್ ಲಾಲ್ವಾನಿ ಮತ್ತಿತರರು ಉಪಸ್ಥಿತರಿದ್ದರು .

Facebook Comments

comments