LATEST NEWS
ಮಂಗಳೂರು – ಬೀದಿ ಬದಿ ಮಕ್ಕಳಲ್ಲಿ ಕೃಷ್ಣನ ನೋಡಿದ ಪೋಟೋಗ್ರಾಫರ್ ಅಪುಲ್ ಆಳ್ವ
ಮಂಗಳೂರು ಸೆಪ್ಟೆಂಬರ್ 09: ಕರಾವಳಿಯಲ್ಲಿ ಕೃಷ್ಣ ಜನ್ಮಾಷ್ಠಮಿ ಸಂಭ್ರಮದಿಂದ ನಡೆದಿದೆ. ಕೃಷ್ಣ ಜನ್ಮಾಷ್ಠಮಿ ಸಂದರ್ಭ ಚಿಕ್ಕಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಮಕ್ಕಳ ಪೋಷಕರು ಸಂತಸಪಟ್ಟಿದ್ದಾರೆ. ಆದರೆ ಬೀದಿ ಬದಿಯಲ್ಲಿರುವ ಅಲೆಮಾರಿ ಮಕ್ಕಳಲ್ಲೂ ಪೋಟೋಗ್ರಾಫರ್ ಒಬ್ಬರು ಕೃಷ್ಣನನ್ನು ನೋಡಿದ್ದು. ಒಂದು ವಿಭಿನ್ನ ಪ್ರಯತ್ನ ಮಾಡುವ ಮೂಲಕ ಅಲೆಮಾರಿ ತಾಯಂದಿರ ಮೊಗದಲ್ಲಿ ನಗುವಿನ ಅಲೆ ಮೂಡಿಸಿದ್ದಾರೆ.
ಮಂಗಳೂರಿನ ಫೋಟೋಗ್ರಾಫರ್ ಅಪುಲ್ ಆಳ್ವ ರಸ್ತೆ ಬದಿಯಲ್ಲಿರು ಅಲೆಮಾರಿ ಮಕ್ಕಳಿಗೆ ಕೃಷ್ಣ ವೇಷ ಹಾಕಿಸಿ ಅವರ ಪೋಟೋ ತೆಗೆದು ಆ ಮಕ್ಕಳ ತಾಯಂದಿರ ಮೊಗದಲ್ಲಿ ನಗುವಿನ ಅಲೆ ಮೂಡಿಸಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಬೀದಿ ಬದಿ ಇರುವ ಮಕ್ಕಳನ್ನು ಅವರ ಪೋಷಕರನ್ನು ಭೇಟಿಯಾದ ಅಪುಲ್ ಆಳ್ವ ಅವರ ತಂಡ ತಾಯಂದಿರ ಮನವೊಲಿಸಿ ಮಕ್ಕಳಿಗೆ ಕೃಷ್ಣವೇಷ ಹಾಕಿದ್ದಾರೆ. 50 ಸೆಕೆಂಡ್‌ಗಳ ವೀಡಿಯೋದಲ್ಲಿ ತನ್ನ ತಂಡದೊಂದಿಗೆ ಮಕ್ಕಳ ತಾಯಿಯರ ಜೊತೆ ಸೇರಿ ಬೀದಿಯ ಮಕ್ಕಳನ್ನು ಕೃಷ್ಣರಾಗಿಸುವ ದೃಶ್ಯವಿದೆ. ಓಡುವ ಮಕ್ಕಳ ಒಂದೆಡೆ ಕೂರಿಸಿ ತಲೆಗೆ ನವಿಲುಗರಿಯನ್ನು ಕಟ್ಟಿ ಕೃಷ್ಣನ ವೇಷವನ್ನು ಹಾಕಲಾಗಿದೆ. ಮಕ್ಕಳ ತಾಯಿಗೂ ಯಶೋಧೆಯಂತೆ ಸ್ವಲ್ಪ ಅಲಂಕಾರ ಮಾಡಲಾಗಿದ್ದು, ಬಾಲಕೃಷ್ಣನ ಎತ್ತಿಕೊಂಡು ಯಶೋಧೆ ಬೀದಿಯಲ್ಲಿ vನಡೆದು ಬರುತ್ತಿರುವಂತೆ, ಅಳುವ ಕಂದನ ಸಮಾಧಾನ ಮಾಡುವಂತೆ ಹೀಗೆ ಹಲವು ರೀತಿಯಲ್ಲಿ ಮಕ್ಕಳ ಹಾಗೂ ತಾಯಂದಿರ ಜೋಡಿಯ ಫೋಟೋವನ್ನು ಅಪುಲ್ ಅಳ್ವ ಸೆರೆ ಹಿಡಿದಿದ್ದಾರೆ.
ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಆರ್ಥಿಕವಾಗಿ ದುರ್ಬಲರಾಗಿರುವ ಸಮುದಾಯದವೊಂದರ ಮಕ್ಕಳಲ್ಲಿ ಕೃಷ್ಣನ ಕಾಣುವ ಪ್ರಯತ್ನ ಮಾಡಿದ್ದ ಅಪುಲ್ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.