LATEST NEWS
ಮಂಗಳೂರು – ಮೂರು ಮಕ್ಕಳನ್ನು ಕೊಂದ ಪಾಪಿ ತಂದೆಗೆ ಮರಣ ದಂಡನೆ ಶಿಕ್ಷೆ ವಿಧಿಸಿದ ನ್ಯಾಯಲಯ
ಮಂಗಳೂರು ಡಿಸೆಂಬರ್ 31: ತನ್ನ ಮೂವರು ಮಕ್ಕಳನ್ನು ಬಾವಿಗೆ ದೂಡಿ ಕೊಲೆಗೈದ ಪಾಪಿ ತಂದೆಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ಘೋಷಿಸಿದೆ.
ಮುಲ್ಕಿ ಠಾಣೆ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಎಂಬಲ್ಲಿ 2022ರ ಜೂನ್ 23ರಂದು ಈ ಘಟನೆ ನಡೆದಿತ್ತು. ಆರೋಪಿ ಹಿತೇಶ್ ಶೆಟ್ಟಿಗಾರ್ (36) ಎಂಬಾತನಿಗೆ ಕೋರ್ಟ್ ಗಲ್ಲು ಶಿಕ್ಷೆ ನೀಡಿದೆ.
ಕುಡಿದು ಬಂದು ಪತ್ನಿ ಜೊತೆಗೆ ಜಗಳವಾಡುತ್ತಿದ್ದ ಪತಿ ಹಿತೇಶ್, ಅದೇ ದ್ವೇಷದಲ್ಲಿ ಆಗಷ್ಟೆ ಶಾಲೆಯಿಂದ ಮನೆಗೆ ಬಂದಿದ್ದ ಮಕ್ಕಳಾದ ರಶ್ಮಿತಾ (13), ಉದಯ ಕುಮಾರ್ (11), ದಕ್ಷಿತ್ (5) ಅವರನ್ನು ಬಾವಿಗೆ ದೂಡಿ ಹಾಕಿದ್ದಾನೆ. ಈ ವೇಳೆ, ದೊಡ್ಡ ಮಗಳು ರಶ್ಮಿತಾ ಬಾವಿಗೆ ಅಳವಡಿಸಿದ್ದ ಪಂಪಿನ ಪೈಪ್ ನಲ್ಲಿ ನೇತಾಡಿ ಜೀವ ರಕ್ಷಿಸಲು ಪ್ರಯತ್ನ ಪಟ್ಟಿದ್ದಾಳೆ. ಆದರೆ ಪೈಪನ್ನು ಕತ್ತಿಯಿಂದ ಕಡಿದು ಆಕೆಯನ್ನು ನೀರಿಗೆ ಬೀಳುವಂತೆ ಮಾಡಿ ಅಮಾನುಷ ಕೃತ್ಯ ಎಸಗಿದ್ದ. ಆಬಳಿಕ ಹೊಟೇಲ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದ ಪತ್ನಿ ಲಕ್ಷ್ಮೀಯನ್ನೂ ಆರೋಪಿ ಹಿತೇಶ್ ಬಾವಿಗೆ ದೂಡಲು ಯತ್ನಿಸಿದ್ದಾನೆ. ಈ ವೇಳೆ, ಆಕೆ ಬೊಬ್ಬೆ ಹಾಕಿದ್ದು ಸ್ಥಳಕ್ಕೆ ಓಡಿ ಬಂದ ಹೂವಿನ ವ್ಯಾಪಾರಿ ಬಾವಿಯಿಂದ ರಕ್ಷಣೆ ಮಾಡಿದ್ದಾರೆ. ಅಲ್ಲದೆ, ತನ್ನ ಪತಿ ಮಾಡಿದ ಕೃತ್ಯದ ಬಗ್ಗೆ ಪತ್ನಿ ಲಕ್ಷ್ಮೀ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ್ದರು. ಕೃತ್ಯದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕುಸುಮಾಧರ್ ಅವರು ಕೋರ್ಟಿಗೆ ದೋಷಾರೋಪ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಮೋಹನ್ ಕುಮಾರ್ ವಾದ ಮಂಡಿಸಿದ್ದರು. ವಿಚಾರಣೆ ಬಳಿಕ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಸಂಧ್ಯಾ ಅವರು ಡಿಸೆಂಬರ್ 31ರಂದು ಶಿಕ್ಷೆ ಘೋಷಣೆ ಮಾಡಿದ್ದು ಆರೋಪಿಯ ಅಮಾನುಷ ಕೃತ್ಯಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿದ್ದಾರೆ.