LATEST NEWS
ಮಂಗಳೂರು ನೈತಿಕ ಪೊಲೀಸ್ ಗಿರಿ – ಚಿನ್ನಾಭರಣ ಮಳಿಗೆಗೆ ನುಗ್ಗಿ ಯುವಕನ ಮೇಲೆ ಹಲ್ಲೆ

ಮಂಗಳೂರು ಡಿಸೆಂಬರ್ 06: ಕಂಕನಾಡಿಯ ಚಿನ್ನಾಭರಣ ಮಾರಾಟ ಮಳಿಗೆಯಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರತ್ಯೇಕ ದೂರುಗಳು ದಾಖಲಾಗಿದೆ.
ನಗರದ ಕಂಕನಾಡಿಯ ಚಿನ್ನಾಭರಣ ಮಾರಾಟ ಮಳಿಗೆಯ ಉದ್ಯೋಗಿಯಾಗಿರುವ ಮುಸ್ಲಿಂ ಯುವಕ, ತನ್ನ ಸಹೋದ್ಯೋಗಿ ಹಿಂದೂ ಯುವತಿಯ ಜೊತೆ ಸಲುಗೆಯಿಂದ ಇದ್ದಾನೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವೇಳೆ ವಿಷಯ ತಿಳಿದು ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಘಟನೆ ಬಗ್ಗೆ ಮಳಿಗೆಯ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿದರು.

ಯುವಕನ ಮೇಲೆ ಹಲ್ಲೆ ನಡೆಸಿದ್ದನ್ನು ಬಜರಂಗ ದಳವು ನಿರಾಕರಿಸಿದೆ. ‘ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ಯುವತಿ ಮತ್ತು ಸಹೋದ್ಯೋಗಿ ಮುಸ್ಲಿಂ ಯುವಕನನ್ನು ಪ್ರೀತಿಸಿರುವ ಬಗ್ಗೆ ಆಕೆಯ ತಂದೆ ತಾಯಿ ನಮ್ಮ ಸಂಘಟನೆಗೆ ದೂರು ನೀಡಿದ್ದರು. ನಮ್ಮ ಸಂಘಟನೆಯ ಕಾರ್ಯಕರ್ತರು ಆ ಯುವತಿಯ ತಂದೆ–ತಾಯಿ ಜೊತೆಗೆ ಮಳಿಗೆಗೆ ತೆರಳಿದ್ದರು. ಮುಸ್ಲಿಂ ಯುವಕನಿಗೆ ಬುದ್ಧಿವಾದ ಹೇಳುವಾಗ ಮಾತಿನ ಚಕಮಕಿ ನಡೆದಿದೆ’ ಎಂದು ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ತಿಳಿಸಿದರು.
ಇನ್ನು ಈ ಘಟನೆ ಬಗ್ಗೆ ಮೂರು ಪ್ರತ್ಯೇಕ ದೂರು ದಾಖಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.