LATEST NEWS
ಮಂಗಳೂರಿನಲ್ಲಿ ಮತ್ತೊಂದು ಸರ್ಕಲ್ ವಿವಾದ – ಶಿವಾಜಿ ಪ್ರತಿಮೆ ಬದಲು ಕೋಟಿ ಚೆನ್ನಯರ ಪುತ್ಥಳಿ ನಿರ್ಮಿಸಿ ಎಂದ ಕಾಂಗ್ರೇಸ್
ಮಂಗಳೂರು: ಸುರತ್ಕಲ್‌ನಲ್ಲಿ ವೀರ ಸಾವರ್ಕರ್ ವೃತ್ತ ನಿರ್ಮಾಣ ವಿಷಯ ಪಾಲಿಕೆ ಹಿಂದಿನ ಸಭೆಯಲ್ಲಿ ವಿವಾದ ಸೃಷ್ಟಿದ್ದರೆ, ಬುಧವಾರ ನಡೆದ ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆ ವಿಷಯದಲ್ಲಿ ಭಾರಿ ಚರ್ಚೆ ನಡೆದು ಕೊನೆಗೆ ಪ್ರತಿಪಕ್ಷ ಕಾಂಗ್ರೆಸ್‌ನ ಆಕ್ಷೇಪ ದಾಖಲಿಸಲಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರತಿಪಕ್ಷದ ನಾಯಕ ನವೀನ್ ಡಿಸೋಜ ವಿಷಯ ಪ್ರಸ್ತಾಪಿಸಿ, ಪಂಪ್‌ವೆಲ್‌ನಲ್ಲಿ ಭಗವಾನ್ ಮಹಾವೀರರ ಕಲಶವಿದೆ. ಮಹಾವೀರ ವೃತ್ತ ಎಂದು ಹೆಸರು ಇದೆ. ಇನ್ನೊಂದೆಡೆ ಅಲ್ಲಿ ಮಹಾರಾಷ್ಟ್ರದವರು ನಮ್ಮ ಬಸ್‌ಗಳಿಗೆ ಮಸಿ ಬಳಿಯುತ್ತಿದ್ದಾರೆ. ಹಾಗಾಗಿ ಇಲ್ಲಿ ಶಿವಾಜಿ ಪ್ರತಿಮೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಭಾಸ್ಕರಚಂದ್ರ ಶೆಟ್ಟಿ, ಶ್ವೇತಾ ಎ., ಮನೋಹರ ಶೆಟ್ಟಿ ತೀವ್ರವಾಗಿ ವಿರೋಧಿಸಿ, ನೀವು ಹಿಂದೂ ನಾಯಕರನ್ನು ಯಾವಾಗಲೂ ಆಕ್ಷೇಪಿಸುತ್ತೀರಿ. ಹಿಂದೂಗಳನ್ನು ಒಗ್ಗೂಡಿಸಿದ ಶಿವಾಜಿ ಪ್ರತಿಮೆ ಹಾಕಿದರೆ ತಪ್ಪೇನು? ಅವರನ್ನು ಮಹಾರಾಷ್ಟ್ರಕ್ಕೆ ಸೀಮಿತ ಮಾಡಬೇಡಿ ಎಂದು ಹೇಳಿದರು.
ನವೀನ್ ಡಿಸೋಜ ಜತೆ ಶಶಿಧರ ಹೆಗ್ಡೆ ದನಿಗೂಡಿಸಿ, ನಾವು ಹಿಂದು ವಿರೋಧಿಗಳಲ್ಲ. ಭಾವನಾತ್ಮಕ ವಿಷಯ ಬಿಟ್ಟು, ರಚನಾತ್ಮಕ ಅಭಿವೃದ್ಧಿ ಕೆಲಸಗಳನ್ನು ಮಾಡಿ. ನಗರಕ್ಕೆ ಶಿವಾಜಿ ಕೊಡುಗೆ ಏನು? ನಮ್ಮವರೇ ಆಗಿರುವ ಕಯ್ಯಾರ, ಕಾರ್ನಾಡ್, ಕೆ.ಎಸ್.ಹೆಗ್ಡೆ ಮತ್ತಿತರರ ಪ್ರತಿಮೆ ಮಾಡಬಹುದಲ್ಲ? ಸಾಧ್ಯವಾದರೆ ಇತಿಹಾಸ ಪುರುಷರಾದ ಕೋಟಿ ಚೆನ್ನಯರ ಪುತ್ಥಳಿ ನಿರ್ಮಿಸಿ ಎಂದು ಸವಾಲು ಹಾಕಿದರು.