LATEST NEWS
ಮಂಗಳೂರು – ಮಡಗಾಂವ್ ವಂದೇ ಭಾರತ್ ಮುಂಬೈಗೆ ವಿಸ್ತರಣೆಗೆ ಸಂಸದ ಕೋಟ ಮನವಿ – ಕ್ರಮಕೈಗೊಳ್ಳುವಂತೆ ಸೂಚಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಉಡುಪಿ ಮಾರ್ಚ್ 16: ಮಂಗಳೂರು ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇಭಾರತ್ ರೈಲು ಪ್ರಯಾಣಿಕರಿಲ್ಲದೆ ರದ್ದಾಗುವ ಸಾಧ್ಯತೆ ಇದೆ ಎಂಬ ವರದಿ ಹಿನ್ನಲೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ರೈಲು ನಿಲ್ಲಿಸದಂತೆ ಮನವಿ ಮಾಡಿದ್ದು, ಅದೇ ರೈಲನ್ನು ಮುಂಬೈ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ರದ್ದಾಗಬಹುದೆಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ರೈಲನ್ನು ರದ್ದು ಮಾಡದೇ ಮುಂಬಯಿವರೆಗೆ ಪ್ರತ್ಯೇಕ ಹೊಸ ರೈಲಾಗಿ ಓಡಿಸುವಂತೆ ಸಚಿವರನ್ನು ಕೋರಿದ್ದು, ಸಚಿವರು ತಕ್ಷಣವೇ ಮಂಗಳೂರು-ಮಡಗಾಂವ್ ವಂದೇಭಾರತ್ ರೈಲನ್ನು ರದ್ದು ಮಾಡದಂತೆಯೂ ಮತ್ತು ಅದನ್ನು ಮುಂಬಯಿ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು-ಉಡುಪಿ ನಗರಗಳ ಆರ್ಥಿಕ ಆಯಾಮಗಳ ವರದಿಯನ್ನು ಸಚಿವರಿಗೆ ನೀಡಿದ್ದು , ಮುಂಬಯಿ ವಿಸ್ತರಣೆಯ ಅಗತ್ಯ ಹಾಗೂ ಮುಂದೆ ಸ್ಲೀಪರ್ ವಂದೇ ಭಾರತ್ ರೈಲು ಬಿಡುಗಡೆಯಾದಾಗ ಆದ್ಯತೆಯ ಮೇರೆಗೆ ಮಂಗಳೂರು-ಮುಂಬಯಿ ಮಧ್ಯೆ ಅದನ್ನು ಓಡಿಸುವಂತೆಯೂ ಕೋರಲಾಯಿತು. ನಮ್ಮೆಲ್ಲಾ ಕೋರಿಕೆಯನ್ನು ಅತ್ಯಂತ ಪ್ರೀತಿಯಿಂದ ಆಲಿಸಿ ಬೇಡಿಕೆಯನ್ನು ಈಡೇರಿಸುವ ಬಗ್ಗೆ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ ಎಂದು ಕೋಟ ತಿಳಿಸಿದ್ದಾರೆ.