DAKSHINA KANNADA
‘ಮಂಗಳೂರು ಜೆರೋಸಾ ಶಾಲಾ ದಾಂಧಲೆ ಶಾಸಕರುಗಳ ಬೆಂಬಲಿತ ಕೋಮು ಶಕ್ತಿಗಳ ಪಿತೂರಿ’..!
ಮಂಗಳೂರು : ಸಂತ ಜೆರೋಸಾ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತರ ನೇತೃತ್ವದಲ್ಲಿ ನಡೆದ ದಾಂಧಲೆಯ ಹಿನ್ನಲೆಯಲ್ಲಿ ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳು, ಗಣ್ಯ ನಾಗರಿಕ ಪ್ರತಿನಿಧಿಗಳ ನಿಯೋಗ ಇಂದು ಜೆರೋಸಾ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿತು.
ಒಟ್ಟು ಘಟನೆಯ ವಿವರವನ್ನು ಪಡೆಯಿತು. ಮತೀಯ ದ್ವೇಷದ ದಾಳಿಗೆ ಗುರಿಯಾದ ಶಾಲೆಯ ಅಧ್ಯಾಪಕರು, ಆಡಳಿತ ಮಂಡಳಿಗೆ ನೈತಿಕ ಬೆಂಬಲ ವ್ಯಕ್ತ ಪಡಿಸಿತು. ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿಯವರ ಪಕ್ಷಪಾತದ, ಮತೀಯ ತಾರತಮ್ಯದ, ದುರುದ್ದೇಶ ಪೂರ್ವಕ ನಡೆಯನ್ನು ನಿಯೋಗ ಒಕ್ಕೊರಲಿನಿಂದ ಖಂಡಿಸಿತು.
ರವೀಂದ್ರ ನಾಥ ಠಾಗೋರ “ವರ್ಕ್ ಅಂಡ್ ವರ್ಶಿಪ್ ಹಾಡಿನ ಪಠ್ಯದ ಸಂಬಂಧಿಸಿ ಶಿಕ್ಷಕಿ ಇಂಗ್ಲಿಷ್ ನಲ್ಲಿ ನಡೆಸಿದ ಪಾಠದಲ್ಲಿ ಉಲ್ಲೇಖಿಸಿದ ವಿಷಯಗಳನ್ನು ಮತೀಯ ಶಕ್ತಿಗಳು ದುರುದ್ದೇಶದಿಂದ ತಿರುಚಿ ಪೋಷಕರನ್ನು ದಾರಿ ತಪ್ಪಿಸಿರುವ ವಿಷಯ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದಾಗ ಮೇಲ್ನೋಟಕ್ಕೆ ಎದ್ದು ಕಾಣಿಸಿದೆ.
ಶಿಕ್ಷಕಿ ಧರ್ಮ ನಿಂದನೆ ಮಾಡಿದ್ದಾರೆ ಎಂದು ಅಪರಿಚಿತ ಮಹಿಳೆಯೋರ್ವರು ಹರಿಯಬಿಟ್ಟ ವಾಯ್ಸ್ ರೆಕಾರ್ಡ್ ಅನ್ನು ಆಧಾರವಾಗಿ ಮುಂದಿಟ್ಟು ಶಿಕ್ಷಕಿಯ ಮೇಲೆ ಆರೋಪ ಮಾಡಲಾಗಿದೆ. ಮೊದಲು ಆಗಮಿಸಿ ಈ ಕುರಿತು ಮೌಖಿಕ ದೂರು ನೀಡಿದ ನಾಲ್ಕು ಪೋಷಕರಿಗೆ ಈ ಕುರಿತು ತನಿಖೆ ನಡೆಸಲು ಒಂದು ವಾರ ಸಮಯ ಕೇಳಲಾಗಿತ್ತು,ಅದಕ್ಕೆ ಆ ಪೋಷಕರು ಸಹಮತವನ್ನು ವ್ಯಕ್ತಪಡಿಸಿದ್ದರು. ಆದರೆ, ತಕ್ಷಣವೇ ಅಪರಿಚಿತ ಗುಂಪೊಂದು ಶಾಲೆಯ ಮುಂಭಾಗ ಆಗಮಿಸಿ ಪ್ರತಿಭಟನೆ ಆರಂಭಿಸಿದ್ದು, ತಕ್ಷಣವೇ ಶಿಕ್ಷಕಿಯ ವಜಾಕ್ಕೆ ಆಗ್ರಹಿಸಿದ ವಿಚಾರ ಆಡಳಿತ ಮಂಡಳಿ ನಿಯೋಗದ ಗಮನಕ್ಕೆ ತಂದಿದ್ದು, ಈ ಬೆಳವಣಿಗೆಗಳು ಶಾಸಕರುಗಳ ಬೆಂಬಲಿತ ಕೋಮು ಶಕ್ತಿಗಳ ಪಿತೂರಿ ಈ ಘಟನೆಯ ಹಿಂದಿರುವುದು ಎದ್ದು ಕಾಣುವಂತಿದೆ.
ಪ್ರಥಮವಾಗಿ ವಾಯ್ಸ್ ರೆಕಾರ್ಡ್ ಹರಿಯಬಿಟ್ಟು ಧರ್ಮ ನಿಂದನೆಯ ಆರೋಪ ಹೊರಿಸಿ, ಪ್ರಚೋದಿಸಿದವರ ಹಿನ್ನಲೆ, ಉದ್ದೇಶ ಸ್ಪಷ್ಟಪಡಿಸಬೇಕಿದೆ. ಈ ಮಹಿಳೆಯ ಮನೆಯ ಮಕ್ಕಳು ಜರೋಜಾ ಶಾಲೆಯಲ್ಲಿ ಕಲಿಯುತ್ತಿರುವುದು ನಿಜವೇ ? ಎಂಬುದೂ ತನಿಖೆಯಿಂದ ಬಹಿರಂಗಗೊಳ್ಳಬೇಕಿದೆ. ಮೊದಲನೆಯದಾಗಿ ಇಂತಹ ದೂರು ಇದ್ದಾಗ ಪೋಷಕರು ಪೇರೆಂಟ್ಸ್ ಎಸೋಷಿಯೇಷನ್ ಗೆ ದೂರು ನೀಡಿ ಆಂತರಿಕ ತನಿಖೆಯಾಗುವಂತೆ ನೋಡಬೇಕಿತ್ತು. ಇದು ಸಾಮಾನ್ಯ ನಿಯಮ. ಇಲ್ಲಿ ಅದನ್ನು ಕಡೆಗಣಿಸಿ ಶಾಸಕರು ಹಾಗೂ ಕೋಮು ಶಕ್ತಿಗಳ ಕೈಯಲ್ಲಿ ವಿದ್ಯಾರ್ಥಿಗಳು, ಪೋಷಕರು ದಾಳಗಳಾಗಿದ್ದು ಎದ್ದು ಕಂಡ ಅಂಶ.
ಬಹಳ ಪ್ರಧಾನವಾಗಿ ತನ್ನ ಕ್ಷೇತ್ರದ ಪ್ರತಿಷ್ಟಿತ ಶಾಲೆಯ ಮೇಲೆ ಆರೋಪ ಬಂದಾಗ ಶಾಸಕರಾದವರು ಮಧ್ಯಸ್ಥಿಕೆ ವಹಿಸಿ ನಿಯಮ ಪ್ರಕಾರ ಕ್ರಮಗಳು ಜರಗುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಶಾಸಕರುಗಳಾಗಿ ಜರೋಜಾ ಶಾಲೆಗೆ ಬರುವ ಬದಲಿಗೆ, ಭಜರಂಗ ದಳ, ಸಂಘಪರಿವಾರದ ಪ್ರತಿನಿಧಿಗಳಂತೆ ಆಗಮಿಸಿದ್ದು, ನಡೆದು ಕೊಂಡದ್ದು ಎದ್ದು ಕಾಣುತ್ತಿರುವ ಅಂಶ. ಶಾಸಕರುಗಳು ಸ್ವತಹ ಅಲ್ಪಸಂಖ್ಯಾತ ಧರ್ಮಗಳ ಧಾರ್ಮಿಕ ನಂಬಿಕೆಗಳನ್ನು ಕೆಣಕುವಂತೆ ಮಾತಾಡಿರುವುದು, ಗೌರವಾನ್ವಿತ ಫಾದರ್ ಗಳನ್ನು ಅಸಂವಿಧಾನಿಕ ಪದಗಳನ್ನು ಬಳಸಿ ನಿಂದಿಸಿರುವುದು ಶಾಸಕರುಗಳು ಸ್ವತಹ ಧರ್ಮದ್ವೇಷದಿಂದ ಕುರುಡಾಗಿರುವುದು, ತಮ್ಮ ಶಾಸನಾತ್ಮಕ ಜವಾಬ್ದಾರಿಯನ್ನು ಮರೆತಿರುವುದು ಕ್ರಿಮಿನಲ್ ಅಪರಾಧ. ಅದಲ್ಲದೆ ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಡಿಡಿಪಿಐ ಮೂಲಕ ಶಾಲೆಯ ಆಡಳಿತ ಮಂಡಳಿಯನ್ನು ಬೆದರಿಸಿರುವುದು, ತಾವೂ ಸ್ವತಹ ಬೆದರಿಕೆ ಒಡ್ಡಿರುವುದು ಎದ್ದು ಕಾಣಿಸುತ್ತದೆ. ಈ ರೀತಿಯ ಬೆದರಿಕೆ, ಭಯ ಸೃಷ್ಟಿಯ ಮೂಲಕ ಆರೋಪ ಹೊತ್ತ ಶಿಕ್ಷಕಿಯನ್ನು ತನಿಖೆಯೆ ಇಲ್ಲದೆ ಶಿಕ್ಷೆಗೆ ಒಳಪಡಿಸುವ ಬಲವಂತದ ಸ್ಥಿತಿಯನ್ನು ನಿರ್ಮಿಸಿರುವುದು, ಪ್ರಾಥಮಿಕ ಶಾಲೆಯ ಮಕ್ಕಳನ್ನು ಧರ್ಮ ದ್ವೇಷ ಹುಟ್ಟಿಸುವ ರೀತಿ ಪ್ರತಿಭಟನೆಗೆ ಬಳಸಿರುವುದು, ಘೋಷಣೆ, ಹೇಳಿಕೆಗೆ ಪ್ರಚೋದಿಸಿರುವುದು ಮಂಗಳೂರಿನ ನಾಗರಿಕ ಪ್ರಜ್ಞೆಗೆ ಮಾಡಿದ ಅಪಮಾನ ಈ ಮೂಲಕ ಮಂಗಳೂರಿನಲ್ಲಿ ಕೋಮು ಹಿಂಸೆ ಸೃಷ್ಟಿಸುವ ಹುನ್ನಾರ ಶಾಸಕರುಗಳಿಗೆ ಹಾಗೂ ಅವರ ಹಿಂಬಾಲಕರುಗಳಿಗೆ ಇದ್ದದ್ದು ಸ್ಪಷ್ಟ.
600
ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟರ ಈ ರೀತಿಯ ನಡೆ ಅತ್ಯಂತ ಅಪಾಯಕಾರಿಯಾಗಿದ್ದು, ಇವರ ಮೇಲೆ ದಾಂಧಲೆ, ಗೂಂಡಾಗಿರಿ, ಬೆದರಿಕೆಯ ಜೊತೆಗೆ ಕೋಮುಗಲಭೆಗೆ ಪ್ರಚೋದನೆಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಸಮಿತಿ ಆಗ್ರಹಿಸುತ್ತದೆ.
ಹಾಗೆಯೆ, ಟೀಚರ್ ಧರ್ಮ ನಿಂದನೆ ಮಾಡಿರುವ ಆರೋಪದ ಕುರಿತು ಇಲಾಖಾ ತನಿಖೆ ಪಾರದರ್ಶಕವಾಗಿ ನಡೆಯಬೇಕು, ಜೊತೆಗೆ ಈ ಪ್ರಕರಣದ ಎಲ್ಲಾ ಆಯಾಮಗಳು, ಬಹಳ ಪ್ರಧಾನವಾಗಿ ಮೊದಲು ವಾಯ್ಸ್ ರೆಕಾರ್ಡ್ ಮೂಲಕ ಪ್ರಚೋದನಾತ್ಮಕವಾಗಿ ಆರೋಪ ಮಾಡಿದ ಮಹಿಳೆಯ ಹಿನ್ನಲೆ, ಉದ್ದೇಶ, ಪೋಷಕರಿಗಿಂತ ಮೊದಲು ಸಂಘಪರಿವಾರದ ಕಾರ್ಯಕರ್ತರು ಆಗಮಿಸಿ ಪ್ರತಿಭಟನೆ ನಡೆಸಿರುವುದು, ಶಾಲೆಯ ವಿದ್ಯಾರ್ಥಿನಿಯರ ಮೂಲಕ ಗಂಭೀರ ಆರೋಪದ, ಮತೀಯವಾದಿ ಮನಸ್ಥಿತಿಯ ಮಾಧ್ಯಮ ಹೇಳಿಕೆ ನೀಡಿಸಿರುವುದು, ವಿದ್ಯಾರ್ಥಿನಿಯರು ಧಾರ್ಮಿಕ(ದ್ವೇಷದ) ಘೋಷಣೆ, ಧಾರ್ಮಿಕ ಸಂಕೇತದ ಶಾಲುಗಳನ್ನು ಬೀಸುವಂತೆ ಮಾಡಿರುವುದು ಪ್ರಕರಣದ ಹಿಂದೆ ವ್ಯವಸ್ಥಿತ ಪಿತೂರಿ ಮೇಲ್ನೋಟಕ್ಕೆ ಕಾಣುವಂತೆ ಮಾಡಿದೆ. ಈ ಅಂಶಗಳೂ ತನಿಖೆ ಒಳಪಡಬೇಕು, ತನಿಖೆಯ ಆಧಾರದಲ್ಲಿ ಕಾನೂನು ಕ್ರಮಗಳು ಜರುಗಬೇಕು ಎಂದು ನಿಯೋಗ ಒತ್ತಾಯಿಸುತ್ತದೆ. ಅದಲ್ಲದೆ, ಪ್ರಕರಣ ಹಳಿ ತಪ್ಪಲು ಶಾಸಕರ ಅಡಿಯಾಳಿನಂತೆ ನಡೆದುಕೊಂಡ ಡಿಡಿಪಿಐ ವರ್ತನೆಯೂ ಒಂದು ಪ್ರಧಾನ ಕಾರಣ. ಡಿಡಿಪಿಐ ಯನ್ನು ಈ ಪ್ರಕರಣದ ತನಿಖಾ ಪ್ರಕ್ರಿಯೆಯ ಜವಾಬ್ದಾರಿಯಿಂದ ಹೊರಗಿಡಬೇಕು, ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ನಿಯೋಗ ಒತ್ತಾಯಿಸುತ್ತದೆ.
ಈ ಎಲ್ಲಾ ಬೆಳವಣಿಗೆಗಳು ಕೋಮು ದ್ವೇಷ, ಪೂರ್ವಾಗ್ರಹಗಳನ್ನು ಹೆಚ್ಚಿಸುವ ಎಲ್ಲಾ ಸಾಧ್ಯತೆಗಳೂ ಇವೆ. ದೀರ್ಘಕಾಲ ಜನಸಾಮಾನ್ಯರ ನಡುವೆ ಇದರ ಪರಿಣಾಮ ಇರುತ್ತದೆ. ಈ ಕುರಿತು ಜನಸಾಮಾನ್ಯರಿಗೂ ಸತ್ಯ ಸಂಗತಿ ತಿಳಿಸುವುದು ವ್ಯವಸ್ಥೆಯ ಆದ್ಯ ಕರ್ತವ್ಯ. ಈ ಹಿನ್ನಲೆಯಲ್ಲಿ ನಿವೃತ್ತ ಐಎಎಸ್ ಅಥವಾ ಐಪಿಎಸ್, ನ್ಯಾಯವಾದಿಗಳ ನೇತೃತ್ವದ ಗಣ್ಯರು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನು ಸರಕಾರ ರಚಿಸಬೇಕು, ಅದು ಈ ಪ್ರಕರಣದ ಎಲ್ಲಾ ಆಯಾಮಗಳ ಸಮಗ್ರ ವರದಿಯನ್ನು ನಾಗರಿಕ ಸಮಾಜದ ಮುಂದೆ ಇಡಲು ಸಾಧ್ಯ ಆಗಬೇಕು ಎಂದು ನಿಯೋಗ ಸರಕಾರದ ಬಳಿ ಮನವಿ ಮಾಡುತ್ತದೆ.
ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟರು ಈ ಪ್ರಕರಣದಲ್ಲಿ ನಡೆದುಕೊಂಡ ರೀತಿ ಅಕ್ಷಮ್ಯ. ಶಾಸನ ಸಭೆಯ ಸದಸ್ಯರು ಈ ರೀತಿ ನಡೆದುಕೊಳ್ಳುವುದು ಅಸಹಜ ಮಾತ್ರ ಅಲ್ಲ, ವ್ಯವಸ್ಥೆಯನ್ನೇ ಬುಡಮೇಲು ಮಾಡುವ ದುಷ್ಕೃತ್ಯ. ಇವರಿಂದ ಇಂತಹ ಕೃತ್ಯಗಳು ಪದೆ ಪದೆ ಪುನರಾವರ್ತನೆ ಆಗುತ್ತಿದೆ. ಈ ಶಾಸಕರುಗಳ ಮೇಲೆ ಮಾನ್ಯ ಸಭಾಪತಿಗಳು ಕ್ರಮ ಕೈಗೊಳ್ಳಬೇಕು, ಹಾಗೂ ಇವರಿಗೆ ಶಾಸನ ಸಭೆಯ ಸದಸ್ಯ ಜವಾಬ್ದಾರಿ ಕುರಿತು ವಿಶೇಷ ತರಬೇತಿಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಯು ಟಿ ಖಾದರ್ ಅವರಿಗೆ ನಿಯೋಗ ದೂರು ನೀಡಲಿದೆ.
ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಸಾಮಾಜಿಕ ಕಾರ್ಯಕರ್ತರಾದ ಎಮ್ ಜಿ ಹೆಗ್ಡೆ, ಮಂಜುಳಾ ನಾಯಕ್, ನ್ಯಾಯವಾದಿಗಳಾದ ಯಶವಂತ ಮರೋಳಿ, ದಿನೇಶ್ ಹೆಗ್ಡೆ ಉಳೆಪಾಡಿ, ಕಾಂಗ್ರೆಸ್ ಮುಖಂಡರಾದ ಪಿ ವಿ ಮೋಹನ್, ಮಾಜಿ ಮೇಯರ್ ಕೆ ಅಶ್ರಫ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಹಿರಿಯ ಕಾರ್ಮಿಕ ನೇತಾರರಾದ ಬಾಲಕೃಷ್ಣ ಶೆಟ್ಟಿ, ಸಿಪಿಐಎಂ ನ ಸುನಿಲ್ ಕುಮಾರ್ ಬಜಾಲ್, ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ ಶೆಟ್ಟಿ, ಭಾರತಿ ಬೋಳಾರ, ವಿವಿಧ ಸಂಘಟನೆಗಳ ಸ್ಟಾನಿ ಅಳ್ವಾರಿಸ್, ಎರಿಕ್ ಲೋಬೋ, ಅನಿಲ್ ಲೋಬೋ, ಸಮರ್ಥ್ ಭಟ್, ಯೋಗೀಶ್ ನಾಯಕ್, ನೆಲ್ಸನ್ ರೋಚ್, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ ಕೆ ಇಮ್ತಿಯಾಜ್, ಸಂತೋಷ್ ಬಜಾಲ್, ಯೋಗಿತಾ, ನಿವೃತ್ತ ಪ್ರಾಧ್ಯಾಪಕರುಗಳಾದ ಡಾ. ಶಿವರಾಮ ಶೆಟ್ಟಿ, ಡಾ. ವಸಂತ ಕುಮಾರ್ ಇದ್ದರು.