LATEST NEWS
ಮಿನಿ ಭೂಗತ ಲೋಕವಾದ ಮಂಗಳೂರು ಜೈಲ್
ಮಿನಿ ಭೂಗತ ಲೋಕವಾದ ಮಂಗಳೂರು ಜೈಲ್
ಮಂಗಳೂರು ಸೆಪ್ಟೆಂಬರ್ 23: ಮಿನಿ ಭೂಗತ ಲೋಕವಾದ ಮಂಗಳೂರಿನ ಕಾರಾಗೃಹ. ಇಲ್ಲಿ ಖೈದಿಗಳ ನಡುವೆ ಹಫ್ತಾವಸೂಲಿ ಎಗ್ಗಿಲ್ಲದೇ ನಡೆಯುತ್ತಿದೆ. ಭೂಗತ ಲೋಕದ ಎಲ್ಲಾ ಕೆಲಸಗಳು ಕಾರಾಗೃಹ ಗೋಡೆಗಳ ನಡುವೆ ರಾಜರೋಷವಾಗಿ ನಡೆಯುತ್ತಿದೆ.
ಮಂಗಳೂರಿನ ಕಾರಾಗೃಹ ಹಲ್ಲೆ, ಹತ್ಯೆ, ಗಾಂಜಾ ಸಾಗಾಟ, ಭೂಗತ ಜಗತ್ತಿನ ಸಂಪರ್ಕ ಗಳಿಂದಾಗಿ ಸದಾ ಸುದ್ದಿಯಲ್ಲೇ ಇರುತ್ತದೆ. ಇಲ್ಲಿ ನಡೆಯುತ್ತಿರುವ ನಿರಂತರ ಹಲ್ಲೆ ಪ್ರಕರಣ ಕಾರಣ ,ಉದ್ದೇಶ ಕೆದಕುತ್ತಾ ಹೋದರೆ ಕಾರಾಗೃಹದಲ್ಲಿ ರಹಸ್ಯವಾಗಿ ಕಾರ್ಯಚರಿಸುತ್ತಿರುವ ಮಿನಿ ಭೂಗತ ಜಗತ್ತಿನ ಕರಾಳ ಮುಖಗಳು ತೆರೆದು ಕೊಳ್ಳುತ್ತವೆ.
ಇಲ್ಲಿ ಇರಿಸಲಾಗಿರುವ ಪುಡಿ ರೌಡಿಗಳು ಜೈಲಿನಲ್ಲೆ ತಂಡ ಕಟ್ಟಿಕೊಂಡು ಇತರ ಕೈದಿಗಳಿಂದ ಹಫ್ತಾ ವಸೂಲಿ ಆರಂಭಿಸುತ್ತಾರೆ. ಇಲ್ಲಿರುವ ವಿಚಾರಣಾಧಿನ ಕೈದಿಗಳಿಗೆ ಅವರು ಎಸಗಿರುವ ಕೃತ್ಯ ಹಾಗು ಅವರಿಗಿರುವ ಬೆಂಬಲದ ಆಧಾರದಲ್ಲಿ ಕೈದಿಗಳ ವರ್ಗಿಕರಣ ನಡೆಯುತ್ತದೆ.
ಹಫ್ತಾ ವಸೂಲಿ ರೂಲ್ಸ್
ಕಾರಾಗೃಹ ದಲ್ಲಿರುವ ವಿಚಾರಣಾಧಿನ ಕೈದಿಗಳ ಆರ್ಥಿಕ ಪರಿಸ್ಥತಿ ಮೇಲೆ ಹಫ್ತಾ ನಿರ್ಧಾರ ವಾಗುತ್ತದೆ. ಇಲ್ಲಿ ಸಾವಿರ ರೂಪಾಯಿ ಯಿಂದ ಲಕ್ಷದ ವರೆಗೆ ಹಫ್ತಾ ನಿರ್ದಾರ ವಾಗುತ್ತದೆ. ಜೈಲಿನ ಹೊರಗಿರುವ ಈ ಪುಡಿ ರೌಡಿಗಳ ಸಹಚರರು ಈ ಹಫ್ತಾವನ್ನು ವಸೂಲು ಮಾಡುತ್ತಾರೆ. ಹಫ್ತಾ ನೀಡಲೊಪ್ಪದವರ ಮೇಲೆ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಲಾಗುತ್ತದೆ.
ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ 5 ಲಕ್ಷ ಹಫ್ತಾ ಪಿಕ್ಸ್
ಜೈಲಿನಲ್ಲಿ ನಡೆಯುತ್ತಿರುವ ಈ ದಂಧೆಗಳಿಗೆ ಇತ್ತಿಚೆಗೆ ಜೈಲಿನಲ್ಲಿ ನಡೆದ ಹಲ್ಲೆ ಪ್ರಕರಣಗಳು ಪುಷ್ಠಿ ನೀಡುತ್ತಿವೆ. ಕಾರಾಗೃಹದ ಬಿ ಬ್ಯಾರಕ್ ನಲ್ಲಿ ಕೆಲವು ದಿನಗಳ ಹಿಂದೆ ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಅವರ ಪುತ್ರ ನವನೀತ್ ಶೆಟ್ಟಿ ಹಾಗು ಜ್ಯೋತಿಷಿ ನಿರಂಜನ್ ಭಟ್ ಅವರ ಮೇಲೆ ರೌಡಿ ಬಜಿಲಕೇರಿ ಧನ್‌ರಾಜ್ ತಂಡ ಮಾರಣಾಂತಿಕ ಹಲ್ಲೆ ನಡೆಸಿತ್ತು. ತಂದೆ ಭಾಸ್ಕರ್ ಶೆಟ್ಟಿ ಕೊಲೆ ಕೃತ್ಯ ವನ್ನು ಒಪ್ಪಿಕೊಳ್ಳುವಂತೆ ರೌಡಿ ಪಡೆ ಒತ್ತಡ ಹಾಕಿತ್ತು . ಇಲ್ಲದಿದ್ದರೆ 5 ಲಕ್ಷ ರೂಪಾಯಿ ಹಫ್ತಾ ನೀಡಬೇಕೆಂದು ಧಮ್ಕಿ ಹಾಕಿತ್ತು. ಹಫ್ತಾ ಕೊಡಲೊಪ್ಪದ ನವನೀತ್ ಶೆಟ್ಟಿ ಹಾಗು ನಿರಂಜನ್ ಭಟ್ ಮೇಲೆ ಸ್ಟೀಲ್ ಡ್ರಮ್ ಹಾಗು ರಾಡ್ ನಿಂದ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ ಗಾಯಗೊಂಡ ನಿರಂಜನ್ ಭಟ್ ಹಾಗು ನವನೀತ್ ಶೆಟ್ಟಿ ಯವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ಈಗ ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಈ ಘಟನೆಯ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೆಲವುದಿನ ಗಳ ಹಿಂದೆ ಇದೇ ತಂಡ ವಿಚಾರಣಾಧಿನ ಕೈದಿ ಬಂಟ್ವಾಳದ ತಾರಾನಾಥ ಎಂಬವರಿಗೆ 50 ಸಾವಿರ ರೂಪಾಯಿ ಹಫ್ತಾ ನೀಡುವಂತೆ ಧಮ್ಕಿ ಹಾಕಿತ್ತು ಆದರೆ ತಾರಾನಾಥ ಹಫ್ತಾ ಕೊಡಲೊಪ್ಪದಾಗ ಮಾರಕಾಸ್ತ್ರಗಳಿಂದ ದಾಳಿ ಸಡೆಸಿತ್ತು. ಈ ಘಟನೆಯ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜೈಲಿನಲ್ಲಿ ಸಹಜ ಸಾವುಗಳ ಹಿಂದೆ ಹಲ್ಲೆ ಪ್ರಕರಣ
ಕಾರಾಗೃಹದ ಎ ಹಾಗು ಬಿ ಬ್ಯಾರಕ್ ಗಳಲ್ಲಿ ಈ ಹಫ್ತಾ ವಸೂಲಿ ಎಗ್ಗಿಲ್ಲದೆ ನಡೆಯುತ್ತಿದೆ. ಹಲ್ಲೆ ಪ್ರಕರಣ ಗಳು ನಿರಂತರವಾಗಿ ನಡೆಯುತ್ತಿದ್ದರು ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿದೆ. ಕಾರಾಗೃಹ ದಲ್ಲಿ ಈ ಹಿಂದೆ ಹಲವಾರು ವಿಚಾರಣಾಧಿನ ಕೈದಿಗಳು ಅನಾರೋಗ್ಯದಿಂದ ಮೃತ ಪಟ್ಟಿದಾರೆ ಎಂದು ಹೇಳಲಾಗಿತ್ತು. ಆದರೆ ಅಲ್ಲಿ ನಡೆಯುತ್ತಿರುವ ಹಲ್ಲೆ ಪ್ರಕರಣಗಳಿಂದಲೇ ಸಾವು ಸಂಭವಿಸುತ್ತದೆ ಎಂಬ ಸಂಶಯ ಕೂಡಾ ವ್ಯಕ್ತವಾಗುತ್ತದೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕಾದ ಅನಿವಾರ್ಯತೆ ಇದೆ.
You must be logged in to post a comment Login