LATEST NEWS
ಮಂಗಳೂರು : ಮಹಾಮಳೆಗೆ ನಗರ ಮುಳುಗಿದ್ದರೂ ಸುರತ್ಕಲ್ ಕಾಟಿಪಳ್ಳ ಭಾಗದ ಜನರಿಗೆ ಕುಡಿಯುವ ನೀರಿಲ್ಲ..!
ಮಂಗಳೂರು : ಮಳೆಗಾಲ ಆರಂಭಗೊಂಡು ಎರಡು ತಿಂಗಳಾದರೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ ಕಾಟಿಪಳ್ಳ ಭಾಗದಲ್ಲಿ ಕುಡಿಯುವ ನೀರಿಲ್ಲ, ಇಲ್ಲಿನ ಜನ ನೀರಿನ ಬರ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಲಿ ಕೊಡಪಾನಗಳ ಮೆರವಣಿಗೆ ಮಾಡಲು ನಾಗರಿಕ ಹೋರಾಟ ಸಮಿತಿ ನಿರ್ಧಾರಿಸಿದೆ.
ಮಳೆಗಾಲದಲ್ಲೂ ನಗರ ಪಾಲಿಕೆಯಿಂದ ನೀರು ಸರಬರರಾಜು ಇಲ್ಲದೆ ಮನೆಯ ಮೇಲಿನಿಂದ ಹರಿದು ಬರುವ ಮಳೆ ನೀರಿಗೆ ಟ್ಯಾಂಕ್ ಇಟ್ಟು ಕಾಟಿಪಳ್ಳದ ನಾಗರಿಕರು ಕಾಯುತ್ತಿದ್ದಾರೆ.. ನಾಲ್ಕು ದಿನಗಳಿಗೊಮ್ಮೆ ಮಾತ್ರ ಪಾಲಿಕೆ ತುಂಬೆಯಿಂದ ಇಲ್ಲಿ ನೀರು ಸರಬರಾಜು ಮಾಡುತ್ತಿದೆ. ಸ್ಥಳೀಯ ಬೋರ್ ವೆಲ್ ಪಂಪ್ ಹಾಳಾಗಿ ತಿಂಗಳುಗಳು ದಾಟಿದರೂ ರಿಪೇರಿ ಮಾಡದೆ ಪಾಲಿಕೆ ಅಧಿಕಾರಿಗಳು ಎಸಿ ರೂಂ ನಲ್ಲಿ ಬೆಚ್ಚಗೆ ಕೂತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲ ಆರಂಭಗೊಂಡು ಎರಡು ತಿಂಗಳಾದರೂ ಸುರತ್ಕಲ್ ಉಪವಿಭಾಗದಲ್ಲಿ ಈಗಲೂ ನೀರು ಸರಬರಾಜಿನಲ್ಲಿ ಅಧಿಕೃತವಾಗಿ ಬೇಸಗೆಯ ರೇಷನಿಂಗ್ ಪದ್ದತಿ ಮುಂದುವರೆದಿದೆ. ಬಿರು ಮಳೆ ಬಂದು ಮಂಗಳೂರು ಭಾಗಶಃ ಮುಳುಗಿದ್ದರೂ ಇಲ್ಲಿ ಮಾತ್ರ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಸುರತ್ಕಲ್ ಉಪವಿಭಾಗದಲ್ಲಿ ಜನರ ನೆರವಿಗೆ ಬಾರದ ಸೋಮಾರಿ ಕಾರ್ಪೊರೇಟರ್ ಗಳು, ಜಡ್ಡುಗಟ್ಟಿರುವ, ಉಡಾಫೆ ನಡವಳಿಕೆಯ ಅಧಿಕಾರಿಗಳು ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಯದಿದ್ದಲ್ಲಿ ಖಾಲಿ ಕೊಡಪಾನಗಳೊಂದಿಗೆ ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲು ನಾಗರಿಕ ಹೋರಾಟ ಸಮಿತಿ ನಿರ್ಧಾರ ಮಾಡಿದೆ.