DAKSHINA KANNADA
ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ
ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ
ಮಂಗಳೂರು ಸೆಪ್ಟೆಂಬರ್ 28: ಶ್ರೀ ಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ನಡೆಯುತ್ತಿರುವ ನವರಾತ್ರಿ ಸಂಭ್ರಮದಲ್ಲಿ ಕೆಪಿಸಿಸಿ ಅದ್ಯಕ್ಷ ಡಾ. ಜಿ. ಪರಮೇಶ್ವರ್ ಭಾಗಿಯಾಗಿದ್ದಾರೆ. ಇಂದು ಮಂಗಳೂರಿಗೆ ಆಗಮಿಸಿದ ಡಾ. ಜಿ ಪರಮೇಶ್ವರ್ ಕುದ್ರೋಳಿ ಗೋಕರ್ಣನಾಥ ದೇವಾಲಯಕ್ಕೆ ಭೇಟಿ ನೀಡಿದರು. ದೇವಾಲಯದ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಜಿ. ಪರಮೇಶ್ವರ್ ಶ್ರೀ ಗೋಕರ್ಣನಾಥ ಹಾಗೂ ನವದುರ್ಗೆಯರ ದರ್ಶನ ಪಡೆದರು.
ಒಂಭತ್ತು ದಿನಗಳ ಕಾಲ ಶಾರದಾ ಮಾತೆ ಸಹಿತ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ನವರಾತ್ರಿಯನ್ನು ಆಚರಿಸಲಾಗುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ದಸರಾ ಉತ್ಸವಕ್ಕೆ ದೀಪ ಬೆಳಗುವ ಮೂಲಕ ಜಿ. ಪರಮೇಶ್ವರ್ ಚಾಲನೆ ನೀಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಪರಮೇಶ್ವರ್ ಅವರು ಸಾಯಿಬಾಬಾ, ಹನುಮಾನ್, ಗೋಕರ್ಣನಾಥ, ಗಣೇಶ, ಸುಬ್ರಹ್ಮಣ್ಯ, ಮಹಾಲಕ್ಷ್ಮೀ, ವೀರಭದ್ರ, ನಾರಾಯಣ ಗುರು ಸನ್ನಿಧಾನದಲ್ಲಿ ಪ್ರಾರ್ಥನೆ ಹಾಗೂ ವಿಶೇಷ ಸಲ್ಲಿಸಿದರು.
ಬಳಿಕ ಶಾರದಾ ಮಾತೆ ಸಹಿತ ನವದುರ್ಗೆಯರ ಸನ್ನಿಧಾನದಲ್ಲೂ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಚಿವ ಯು.ಟಿ. ಖಾದರ್, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರಿಗೆ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ದಸರಾಕ್ಕೆ ಚಾಲನೆ ನೀಡುವುದು ನನ್ನ ಸೌಭಾಗ್ಯ. ಶ್ರೀ ಕ್ಷೇತ್ರ ಒಂದು ಸಿದ್ಧಾಂತದ ಮೇಲೆ ಸ್ಥಾಪನೆಯಾಗಿದೆ. ಸೌಹಾರ್ದತೆಯಲ್ಲಿ ಬಾಳಬೇಕೆಂಬುದು ನಾರಾಯಣ ಗುರುಗಳ ಸಂದೇಶ. ಈ ಸಂದೇಶವನ್ನು ಶ್ರೀ ಕ್ಷೇತ್ರ ಪ್ರತಿಪಾದಿಸುತ್ತದೆ ಎಂದು ಹೇಳಿದರು.