LATEST NEWS
ಮಂಗಳೂರು – ಭಕ್ತರಿಗೆ ಶುಚಿತ್ವದ ಪಾಠ ಮಾಡಿದ ದೈವ
ಮಂಗಳೂರು ಡಿಸೆಂಬರ್ 28: ಕರಾವಳಿಯಲ್ಲಿ ದೈವಾರಾಧನೆ ಪ್ರಕೃತಿಯ ಆರಾಧನೆ ಜೊತೆ ಜೊತೆಯಾಗಿ ನಡೆಯುತ್ತದೆ. ಪ್ರಕೃತಿಯನ್ನೇ ಇಲ್ಲಿ ದೇವರು, ದೈವ ಎಂದು ನಂಬುವ ಹಲವಾರು ಸಂಪ್ರದಾಯ, ಪದ್ಧತಿಗಳು ಕರಾವಳಿ ಭಾಗದಲ್ಲಿದೆ. ಈ ಪ್ರಕೃತಿಯನ್ನು ಹಾಳುಗೆಡವಿದರೆ ದೈವಗಳು ಕೂಡಾ ಮುಸಿಸುತ್ತದೆ ಎನ್ನುವುದಕ್ಕೊಂದು ನೈಜ ಉದಾಹರಣೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೊಲ್ಯ ಎಂಬಲ್ಲಿ ನಡೆದ ದೈವದ ನೇಮದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ದೈವದ ನೇಮ ಆಗುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ಕೆಂಡಾಮಂಡಲವಾದ ವೈದ್ಯನಾಥ ದೈವ ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ ಹೊರಡೋಲ್ಲವೆಂದು ದೈವದ ಸೇವೆ ನಡೆಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡಿದೆ. ಮಂಗಳೂರು ಹೊರವಲಯದ ಕೊಲ್ಯದ ಕನೀರುತೋಟದಲ್ಲಿ ಈ ದೈವಾರಾಧನೆ ನಡೆದಿದೆ. ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆಜಾತ್ರೆ ಡಿ.25 ರ ಬುಧವಾರ ನಡೆದಿತ್ತು.
ರಾತ್ರಿ ಇಲ್ಲಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು ವಲಸರಿ ಎಂದರೆ ದೈವ ಕಟ್ಟಿದ ನರ್ತಕ ಒಂದು ಕಡೆಯಿಂದ ಇನ್ನೊಂದು ಕಡೆಗೆ ನರ್ತನದ ಮೂಲಕ ಸಾಗುವುದಾಗಿದೆ. ದೈವದ ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ. ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿಯೇ ಇದಕ್ಕೆ ಕಾರಣ. “ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ?. ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ” ಎಂದು ವೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದೆ. ದೈವದ ಪ್ರಕೃತಿಯ ಮೇಲಿನ ಕಾಳಜಿಗೆ ತಕ್ಷಣ ಎಚ್ಚೆತ್ತ ಆಡಳಿತ ಮಂಡಳಿ ದೈವ ಸಾಗುವ ದಾರಿಯನ್ನು ಶುಚಿಗೊಳಿಸಿದೆ. ದಾರಿ ಶುಚಿಗೊಂಡ ಬಳಿಕ ವೈದ್ಯನಾಥ ದೈವವು ತನ್ನ ವರ್ಷಂಪ್ರತಿ ನಡೆಯುವ ವಲಸರಿಯನ್ನು ನೆರವೇರಿಸಿದೆ.