KARNATAKA
“ಮಂಗಳೂರು ಪಾಲಿಕೆ ಭ್ರಷ್ಟರ ಕೂಪ, ಅಧಿಕಾರಿಗಳು ಲಂಚ ಕೇಳ್ತಾರೆ” ಮೇಯರ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸುರಿಮಳೆ..!
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಭ್ರಷ್ಟರ ಕೂಪವಾಗಿದ್ದು, ಅಧಿಕಾರಿಗಳಿಗೆ ಲಂಚ ಕೊಡದೆ ಯಾವುದೇ ಕೆಲಸವಾಗುವುದಿಲ್ಲ ಎಂದು ಸಾರ್ವಜನಿಕರೊಬ್ಬರು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿಯವರಿಗೆ ದೂರು ನೀಡಿದ್ದಾರೆ.
ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಶುಕ್ರವಾರ ನಡೆದ ಎರಡನೇ ಫೋನ್- ಇನ್ ಕಾರ್ಯಕ್ರಮದಲ್ಲಿ ಮಂಗಳೂರಿನ ಕೊಟ್ಟಾರ ನಿವಾಸಿ ರಾಜೇಶ್ ಎನ್ನುವವರು ಈ ಆರೋಪ ಮಾಡಿದ್ದು, ಮೇಯರ್ ಗೆ ಒಳ್ಳೆಯ ಕೆಲಸ ಮಾಡುವ ಕಾಳಜಿಯಿದ್ದರೂ, ಅಧಿಕಾರಿಗಳು ಮಾತ್ರ ಅದನ್ನು ಮಾಡಲು ಬಿಡುತ್ತಿಲ್ಲ. ಗುಮಾಸ್ತನಿಂದ ಕಮಿಷನರ್ ವರೆಗೂ ಎಲ್ಲರಿಗೂ ಲಂಚ ನೀಡಬೇಕಾದ ಸ್ಥಿತಿಯಿದೆ. ಹಣ ನೀಡದೆ ಯಾವುದೇ ಕೆಲಸ ನಡೆಯುವುದಿಲ್ಲ.ಕಾರ್ಪೋರೇಟರ್ ಗಳನ್ನು ಅಧಿಕಾರಿಗಳು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿನ ಸುರಿಮಳೆಯನ್ನೇ ಗೈದಿದ್ದಾರೆ. ಇದಕ್ಕೆ ಉತ್ತರಿಸಿದ ಮೇಯರ್ ಈ ಬಗ್ಗೆ ಸೂಕ್ತ ಗಮನ ಹರಿಸುವ ಭರವಸೆಯನ್ನು ನೀಡಿದ್ದಾರೆ.
ಮತ್ತೊಂದು ದೂರವಾಣಿ ಕರೆಮಾಡಿದ ಕ್ರಿಸ್ನಿ ಎನ್ನುವ ಮಹಿಳೆ ಸೂಟರ್ ಪೇಟೆ ಎನ್ನುವಲ್ಲಿ ಚಾಮುಂಡೇಶ್ವರಿ ಹೆಸರಿನ ವರ್ಕ್ ಶಾಪೊಂದು ಕಾರ್ಯಾಚರಿಸುತ್ತಿದ್ದು, ಇದರಿಂದ ಹೊರಡುವ ಶಬ್ದದಿಂದ ಸ್ಥಳೀಯ ನಿವಾಸಿಗರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ದೂರು ನೀಡಲು ಹೋದ ಸಂದರ್ಭದಲ್ಲಿ ವರ್ಕ್ ಶಾಪ್ ಮಾಲಕ ದೂರು ನೀಡಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ನೀಡುತ್ತಿದ್ದಾರೆ. ಆ ಮೂಲಕ ಸ್ಥಳೀಯರಿಗೆ ಇಮೋಶನಲ್ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದರು. ಈ ನಿಟ್ಟಿನಲ್ಲಿ ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮೇಯರ್ ಅವರನ್ನು ಒತ್ತಾಯಿಸಿದರು. ದೂರಿಗೆ ಸ್ಪಂದಿಸಿದ ಮೇಯರ್ ಸುಧೀರ್ ಶೆಟ್ಟಿ ಸ್ಥಳಕ್ಕೆ ಆರೋಗ್ಯ ಅಧಿಕಾರಿಗಳನ್ನು ಕಳುಹಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು.
ಇತ್ತೀಚೆಗೆ ಮಟ್ಕಾ ಅಂಗಡಿಯಲ್ಲಿ ಕಲುಶಿತ ನೀರನ್ನು ಬಳಸಿ ಗ್ರಾಹಕರಿಗೆ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ರೀತಿಯ ಜಾತ್ರಾ ಸಂತೆ ವ್ಯಾಪಾರಕ್ಕೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಲಿದ್ದಾರೆ. ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಆಗುವಂತಹ ಆಹಾರ ಮಾರಾಟದ ಅಂಗಡಿಗಳು ಕಂಡುಬಂದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಹಬ್ಬದ ಸಂದರ್ಭ ಪರವೂರಿನಿಂದ ಬರುವ ಬಡ ಹೂವು ವ್ಯಾಪಾರಿಗಳು ಹಂಪನಕಟ್ಟೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಮಾರಾಟ ಮಾಡಿ ಉಳಿದ ಹೂವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದು ಕೊಳೆತು ನಗರದ ಸೌಂದಯಕ್ಕೆ ಅಡ್ಡಿಯಾಗುತ್ತಿದೆ. ಅವರಿಗೆ ನಿರ್ದಿಷ್ಟ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಜಿ.ಕೆ. ಭಟ್ ಮೇಯರ್ಗೆ ಮನವಿ ಮಾಡಿದರು.
ಆಗಸ್ಟ್ 22ರಂದು ಖಾತಾಕ್ಕೆ ಅರ್ಜಿ ಸಲ್ಲಿಸಿದ್ದೆ, ನಾಲ್ಕು ದಿನ ಬಿಟ್ಟ ಬರಲು ಹೇಳಿದಂತೆ ಹೋದಾಗ ಮತ್ತೆ ಒಂದು ವಾರ ಬಿಟ್ಟು ಬರಲು ಹೇಳಿದರು. ಹೀಗೆ 10 ಸಲ ಹೋದರೂ ಖಾತಾ ಸಿಕ್ಕಿಲ್ಲ. ಈಗ ಮತ್ತೆ ಆನ್ ಲೈನ್ ಅರ್ಜಿ ಸಲ್ಲಿಸಲು ಹೇಳುತ್ತಿದ್ದಾರೆ. ನಾನೇನು ಮಾಡಬೇಕು ಎಂದು ಕಾರ್ಸ್ಟ್ರೀಟ್ನ ಜಗದೀಶ್ ಕಾಮತ್ ದೂರಿದಾಗ, ಸೋಮವಾರ ಸಂಜೆ ನನ್ನ ಕೊಠಡಿಗೆ ಬಂದು ಖಾತಾ ಪಡೆದುಕೊಂಡು ಹೋಗಿ. ತಡವಾಗಲು ಕಾರಣವೇನೆಂದು ತಿಳಿದು, ತಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಮೇಯರ್ ಹೇಳಿದರು.
ಒಂದು ಗಂಟೆಗೆ ಸೀಮಿತಗೊಂಡಿದ್ದ ಈ ಫೋನ್ ಇನ್ ಕಾರ್ಯಕ್ರಮದಲ್ಲಿ 26 ಮಂದಿ ಸಾರ್ವಜನಿಕರು ಕರೆ ಮಾಡಿ ತಮ್ಮ ಅಹವಾಲುಗಳನ್ನು ಮೇಯರ್ ಮುಂದೆ ತೋಡಿಕೊಂಡರು.
ಈ ಸಂದರ್ಭ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಕಾರ್ಯನಿರ್ವಾಹಕ ಅಧಿಕಾರಿ ನರೇಶ್ ಶೆಣೈ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.