LATEST NEWS
ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿ ವಿಟ್ಲದಲ್ಲಿ ಪತ್ತೆಯಾದ ಕರೋನಾ ಶಂಕಿತ ವ್ಯಕ್ತಿ
ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿ ವಿಟ್ಲದಲ್ಲಿ ಪತ್ತೆಯಾದ ಕರೋನಾ ಶಂಕಿತ ವ್ಯಕ್ತಿ
ಬಂಟ್ವಾಳ ಮಾರ್ಚ್ 9: ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದ ಶಂಕಿತ ಕರೋನಾ ವೈರಸ್ ಪ್ರಕರಣದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ದಕ್ಷಿಣಕನ್ನಡ ಜಿಲ್ಲಾಡಳಿತ ಯಶಸ್ವಿಯಾಗಿದೆ.
ಶಂಕಿತ ಕರೋನಾ ವೈರಸ್ ನ ಲಕ್ಷಣಗಳ ಹಿನ್ನಲೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವೆಲ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದ ವ್ಯಕ್ತಿ ವಿಟ್ಲದ ಪಳಿಕೆ ಸಮೀಪದ ರಂಗರಮಜಲು ಎಂಬಲ್ಲಿ ಪತ್ತೆಯಾಗಿದ್ದಾರೆ.
ದುಬೈನಿಂದ ಆಗಮಿಸಿದ ಉಳ್ಳಾಲ ಮೂಲದ ಮಹಮ್ಮದ್ ಅಜರುದ್ದೀನ್ (33) ಅವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ ನಡೆಸಿದಾಗ ಜ್ವರದ ಹಿನ್ನಲೆಯಲ್ಲಿ ಮಂಗಳೂರು ವೆಲ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಕರೋನಾ ವೈರಸ್ ಪತ್ತೆಗಾಗಿ ವ್ಯಕ್ತಿಯಿಂದ ಸ್ಯಾಂಪಲ್ ತೆಗೆಯುವ ಮೊದಲೆ ಇವರು ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ವೆನ್ಲಾಕ್ ಆಸ್ಪತ್ರೆಯಿಂದ ಪರಾರಿಯಾಗುತ್ತಿದ್ದಂತೆ ಇಡೀ ದಕ್ಷಿಣಕನ್ನಡ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಶಂಕಿತ ವ್ಯಕ್ತಿಯ ಮನೆಗೆ ತೆರಳಿದರೂ ಅವರ ಮನೆವರು ಸರಿಯಾಗಿ ಸ್ಪಂದಿಸದ ಹಿನ್ನಲೆ ಪೊಲೀಸ್ ಇಲಾಖೆ ಸಹಾಯವನ್ನು ಕೇಳಿದ್ದರು.
ಮಧ್ಯಾಹ್ನದ ಸಮಯ ಬಂಟ್ವಾಳ ತಾಲೂಕು ವಿಟ್ಲದ ಪಳಿಕೆ ರಂಗರಮಜಲು ಎಂಬಲ್ಲಿರುವ ಪತ್ನಿಯ ಮನೆಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಜಿಲ್ಲೆಯ ಅಧಿಕಾರಿಗಳಿಗೆ ಸ್ಥಳೀಯರಲ್ಲಿ ಸಿಕ್ಕಿತ್ತು. ನಂತರ ಆರೋಗ್ಯ ಇಲಾಖೆ ಹಾಗೂ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕಾಗಮಿಸಿ ಬಂಟ್ವಾಳ ಆಸ್ಪತ್ರೆಗೆ ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.