LATEST NEWS
ಮನಪಾ ಸಾಮಾನ್ಯಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಗಲಾಟೆ – ಸಾಮಾನ್ಯ ಸಭೆ ಸ್ಥಗಿತ

ಮಂಗಳೂರು ಫೆಬ್ರವರಿ 29: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ ಎಂದು ಆರೋಪಿಸಿ ಪಾಲಿಕೆ ವಿಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಭಾರೀ ಗದ್ದಲಕ್ಕೆ ಕಾರಣವಾದ ಸಾಮಾನ್ಯ ಸಭೆಯಲ್ಲಿ ಮೇಯರ್ ಗೆ ಸರಿಯಾಗಿ ಉತ್ತರ ನೀಡಲು ಸಾಧ್ಯವಾಗದ ಕಾರಣ ಎರಡೆರಡು ಬಾರಿ ಸಾಮಾನ್ಯ ಸಭೆಯನ್ನು ನಿಲ್ಲಿಸಿ ಎದ್ದು ಹೋದ ಘಟನೆ ನಡೆದಿದೆ.
ಮನಪಾದ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆ ಬೆಳಗ್ಗೆ 10.30ಕ್ಕೆ ನಿಗದಿಯಾಗಿತ್ತು. ಹಿಂದಿನ ಸಭೆಯ ನಿರ್ಣಯಗಳನ್ನು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸ್ಥಿರೀಕರಣಗೊಳಿಸುವ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯೆ ಸಂಗೀತ ಆರ್. ನಾಯಕ್ ಅವರು ಆಸ್ತಿ ತೆರಿಗೆ ವಿಚಾರ ಪ್ರಸ್ತಾಪಿಸಲು ಮುಂದಾದರು.

ಈ ಸಂದರ್ಭ ಪ್ರತಿಪಕ್ಷವಾದ ಕಾಂಗ್ರೆಸ್‌ನ ಸದಸ್ಯರು ಕೈಯ್ಯಲ್ಲಿ ‘ತೆರಿಗೆ ಇಳಿಸಿ’, ‘ಸಾರ್ವಜನಿಕರಿಗೆ ಹೊರೆಯಾಗುವ ತೆರಿಗೆ ಇಳಿಸಿ’ ಎಂಬ ಭಿತ್ತಿಪತ್ರಗಳನ್ನು ಹಿಡಿದು ಮೇಯರ್ ಪೀಠದೆದುರು ತೆರಳಿ ಘೋಷಣೆ ಕೂಗಿದರು. ಬಿಜೆಪಿ ಸದಸ್ಯರನೇಕರು ಈ ಸಂದರ್ಭ ಕಾಂಗ್ರೆಸ್ ಸದಸ್ಯರು ರಾಜಕೀಯ ಮಾಡುತ್ತಿದ್ದಾರೆಂದು ತಮ್ಮ ಆಸನದ ಮೈಕ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಪರಸ್ಪರ ಸದಸ್ಯರು ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು. ಗದ್ದಲ ವಾತಾವರಣದ ನಡುವೆ, ಸಭೆ ನಿಯಂತ್ರಿಸಲಾಗದೆ, ಲಾಂಗ್ ಬೆಲ್ ಪ್ರೆಸ್ ಮಾಡಿ ಮೇಯರ್ ಏನೂ ಹೇಳದೆ ಸದನದಿಂದ ಹೊರ ನಡೆದರು
ಮತ್ತೆ ಸಭೆ ಆರಂಭವಾಗುತ್ತಿದ್ದಂತೆ ಮತ್ತೆ ಪ್ಲೆಕಾರ್ಡ್ ಹಿಡಿದ ಕಾಂಗ್ರೆಸ್ ಸದಸ್ಯರು ಬಾವಿಗಿಳಿದು ಪ್ರತಿಭಟಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ಭಿತ್ತಿಪತ್ರ ಹಿಡಿದು ಘೋಷಣೆ ಮೊಳಗಿಸಿದರು. ಈ ಕುರಿತು ಮಾತನಾಡಿದ ಕಾಂಗ್ರೆಸ್ ಪಕ್ಷದ ಮ.ನ.ಪಾ ಸದಸ್ಯ ಎ.ಸಿ.ವಿನಯರಾಜ್, “ಕೇಂದ್ರ ಸರ್ಕಾರದ ಸೂಚನೆಯಂತೆ ಹಿಂದಿನ ಬಿಜೆಪಿ ರಾಜ್ಯ ಸರ್ಕಾರದ ಆದೇಶದಂತೆ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಇಲ್ಲದ ಅಂಗಳಕ್ಕೂ ಈ ಬಾರಿ ತೆರಿಗೆ ಹಾಕಲಾಗಿದೆ. ಇದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ” ಎಂದು ಹೇಳಿದರು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, “ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಭೂಮಿ ದರ ಹೆಚ್ಚಿಸಿ ಆದೇಶ ಮಾಡಿದ್ದರಿಂದ ತೆರಿಗೆ ಹೆಚ್ಚಳವಾಗಿದೆ. ನಾವು ಹಳೇ ದರಕ್ಕೆ ಶೇ.3ರಷ್ಟು ಹೆಚ್ಚಿಸಲು ಸೂಚಿಸಿದ್ದರೂ ಆಯುಕ್ತರು ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದ ಆಸ್ತಿ ತೆರಿಗೆ ಹೆಚ್ಚಳಕ್ಕೆ ಕಾರಣರಾಗಿದ್ದಾರೆ” ಎಂದು ದೂರಿದರು.