LATEST NEWS
ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಲೋಪ – ಡ್ರಗ್ಸ್ ಕಳ್ಳಸಾಗಣೆ ಜಾಲದ ಬೆನ್ನತ್ತಿ ದೆಹಲಿಗೆ ತೆರಳಿದ ಪೊಲೀಸರ ತಂಡ

ಮಂಗಳೂರು ಮಾರ್ಚ್ 18: ಇಡೀ ರಾಜ್ಯದ ಇತಿಹಾಸದಲ್ಲೇ ಅತೀ ದೊಡ್ಡ ಡ್ರಗ್ಸ್ ಪ್ರಕರಣ ಹಿಡಿದಿರು ಮಂಗಳೂರು ಸಿಸಿಬಿ ಪೊಲೀಸರು ಇದೀಗ ಡ್ರಗ್ಸ್ ಸಾಗಾಟ ವಾಗಿರುವ ವಿಮಾನ ನಿಲ್ದಾಣಗಳ ಭದ್ರತಾ ಲೋಪದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರ ತಂಡವೊಂದು ನವದೆಹಲಿಗೆ ತೆರಳಿದೆ.
ವಿಮಾನ ನಿಲ್ದಾಣಗಳಲ್ಲಿ ಕಠಿಣ ಭದ್ರತಾ ತಪಾಸಣೆಯ ವ್ಯವಸ್ಥೆ ಇದೆ. ಆದರೂ, ಆರೋಪಿ ಮಹಿಳೆಯರಿಬ್ಬರ ಟ್ರಾಲಿ ಬ್ಯಾಗ್‌ಗಳಲ್ಲಿ ಇದ್ದ ಮಾದಕ ಪದಾರ್ಥ ಏಕೆ ಪತ್ತೆಯಾಗಲಿಲ್ಲ ಎಂಬುದು ಸಂಶಯಕ್ಕೆ ಕಾರಣವಾಗಿದೆ. ಭಾರಿ ಪ್ರಮಾಣದಲ್ಲಿ ಮಾದಕ ಪದಾರ್ಥ ಕಳ್ಳಸಾಗಣೆಗೆ ವಿಮಾನ ನಿಲ್ದಾಣಗಳ ಭದ್ರತಾ ತಪಾಸಣೆಯ ಲೋಪ ಹೇಗೆ ಕಾರಣವಾಗಿದೆ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಮಾನ ನಿಲ್ದಾಣಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.

‘ನಮ್ಮ ತಂಡವು ಡಿಜಿಟಲ್ ಸಾಕ್ಷ್ಯಗಳ ತಾಂತ್ರಿಕ ಅಂಶಗಳನ್ನು ಆಳವಾಗಿ ಪರಿಶೀಲನೆ ನಡೆಸುತ್ತಿದೆ. ಆರೋಪಿಗಳ ಚಲನವಲನಗಳ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದರು. ವಿಮಾನ ನಿಲ್ದಾಣಗಳಲ್ಲಿ ಕಠಿಣ ಭದ್ರತಾ ತಪಾಸಣೆಯ ವ್ಯವಸ್ಥೆ ಇದ್ದರೂ ದಕ್ಷಿಣ ಆಫ್ರಿಕಾದ ಮಹಿಳೆಯರ ಟ್ರಾಲಿ ಬ್ಯಾಗ್‌ಗಳಲ್ಲಿ ಇದ್ದ ಡ್ರಗ್ಸ್ ಯಾಕೆ ಪತ್ತೆಯಾಗಲಿಲ್ಲ ? ಎಂಬುದು ಪೊಲೀಸರ ಸಂಶಯಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಾರ್ಚ್ 14ರಂದು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಹೊರಬಂದು ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದ ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರಾದ ಬಾಂಬಾ ಫಾಂಟಾ ಹಾಗೂ ಅಬಿಗೇಲ್ ಅಡ್ನೋಯಿಸ್ ಎಂಬವರನ್ನು ಮಂಗಳೂರಿನ ಸಿಸಿಬಿ ಎಸಿಪಿ ಮನೋಜ್ ನಾಯ್ಕ್ ನೇತೃತ್ವದ ತಂಡವು ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರದಲ್ಲಿ ಬಂಧಿಸಿತ್ತು.
ಇವರಿಂದ ಸುಮಾರು 75 ಕೋಟಿ ರೂ. ಬೆಲೆ ಬಾಳುವ 37.87 ಕೆ.ಜಿಗಳಷ್ಟು ನಿಷೇಧಿತ ಮಾದಕ ವಸ್ತು ಎಂಡಿಎಂಎಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಟ್ರಾಲಿ ಬ್ಯಾಗ್‌ನಲ್ಲಿ ಮಾದಕ ವಸ್ತುವನ್ನು
ಸಾಗಿಸುವ ಯತ್ನದಲ್ಲಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಆರೋಪಿ ಮಹಿಳೆಯರಿಬ್ಬರು ದಿಲ್ಲಿಯಿಂದ 37 ಸಲ ಬೆಂಗಳೂರಿಗೆ ಹಾಗೂ ಮುಂಬೈಗೆ 22 ಸಲ ತೆರಳಿದ್ದರು. ಮಹಿಳೆಯರಿಬ್ಬರ ಬಂಧನದಿಂದ ದೇಶದ ಮಹಾನಗರಗಳಲ್ಲಿ ಡ್ರಗ್ಸ್ ಕಳ್ಳಸಾಗಣೆಯ ದೊಡ್ಡ ಜಾಲ ಇರುವುದು ಬೆಳಕಿಗೆ ಬಂದಿದೆ.