LATEST NEWS
ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಭೂಕುಸಿತ – ಬದಲಿ ಮಾರ್ಗದಲ್ಲಿ ರೈಲು ಸಂಚಾರ
ಮಂಗಳೂರು ಜುಲೈ 26: ಮಂಗಳೂರು-ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಭೂ ಕುಸಿತವಾಗಿದ್ದು, ಮಂಗಳೂರು-ಬೆಂಗಳೂರು ಮೂಲಕ ಇಂದು ಸಂಚರಿಸುತ್ತಿದ್ದ ರೈಲುಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದೆ ೆಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಜೊತೆ ಸುಂಟರಗಾಳಿಯೂ ಬೀಸುತ್ತಿದೆ. ಈ ನಡುವೆ ಸುಬ್ರಹ್ಮಣ್ಯ ಸಮೀಪದ ರೈಲ್ವೆ ಹಳಿ ಮೇಲೆ ಶುಕ್ರವಾರ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗಗಳ ನಡುವೆ ರೈಲು ಮಾರ್ಗದ ಕೆಳಗಿನಿಂದ ಮಣ್ಣು ಕುಸಿದಿದೆ. ಇದರಿಂದಾಗಿ ಸಂಜೆ 5.30 ಕ್ಕೆ ಸುಬ್ರಹ್ಮಣ್ಯ ರೈಲು ನಿಲ್ದಾಣದಿಂದ ಹೊರಟ ಬಿಜಾಪುರ ಎಕ್ಸ್‌ಪ್ರೆಸ್ ರೈಲು ವಾಪಾಸು ಸುಬ್ರಹ್ಮಣ್ಯ ನಿಲ್ದಾಣಕ್ಕೆ ಆಗಮಿಸಿದೆ.
ಭೂಕುಸಿತ ಉಂಟಾದ ಪರಿಣಾಮ ಮಂಗಳೂರು-ಬೆಂಗಳೂರು ರೈಲು ಸೇರಿದಂತೆ ಮಾರ್ಗದ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರವನ್ನು ಬದಲಿ ಮಾರ್ಗಗಳ ಮೂಲಕ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಾಸನ- ಮಂಗಳೂರು ನಡುವೆ ಸಂಚರಿಸುವ ರೈಲುಗಳಿಗೆ ಕೇರಳ- ತಮಿಳುನಾಡು ಮೂಲಕ ಸಂಚಾರಕ್ಕೆ ಕಲ್ಪಿಸಲಾಗಿದೆ. ಶುಕ್ರವಾರ ಸಂಜೆ ಕಾರವಾರ – ಬೆಂಗಳೂರು ರೈಲು ಮತ್ತು ಕೇರಳದ ಕಣ್ಣೂರಿನಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಸಾಗುವ ರೈಲಿನ ಸಂಚಾರ ವಿಳಂಬವಾಗಿದ್ದು, ತಮಿಳುನಾಡು ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಕಲೇಶಪುರ ಭೂಕುಸಿತದ ಕಾರಣ ಏಳು ರೈಲುಗಳ ಸಂಚಾರವನ್ನ ಮಾರ್ಗ ಬದಲಾವಣೆ ಮಾಡಲಾಗಿದೆ.