DAKSHINA KANNADA
ಹದಗೆಟ್ಟಿದೆ ರಸ್ತೆ, ಏನಿದು ಮಂಗಳೂರು ಮಹಾನಗರ ಪಾಲಿಕೆ ಅವಸ್ಥೆ !

ಹದಗೆಟ್ಟಿದೆ ರಸ್ತೆ, ಏನಿದು ಮಂಗಳೂರು ಮಹಾನಗರ ಪಾಲಿಕೆ ಅವಸ್ಥೆ !
ಮಂಗಳೂರು, ಸೆಪ್ಟಂಬರ್ 20: ಸ್ಮಾರ್ಟ್ ಸಿಟಿ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಡಳಿತದಿಂದ ಕರೆಸಿಕೊಳ್ಳುತ್ತಿರುವ ಮಂಗಳೂರು ನಗರದ ರಸ್ತೆಗಳಲ್ಲಿ ವಾಹನ ಸವಾರರು ಎದ್ದು-ಬಿದ್ದು ಓಡಾಡಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
ಅದರಲ್ಲೂ ಬೆಂದೂರುವೆಲ್ ನಿಂದ ಪಂಪುವೆಲ್ ಸಂಪರ್ಕಿಸುವ ರಸ್ತೆಯ ಗತಿ ಅಧೋಗತಿಯಾಗಿದೆ.

ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡ ತಕ್ಷಣವೇ ರಸ್ತೆಗಳಲ್ಲಿ ಹೊಂಡಗಳು ನಾಯಿಕೊಡೆಗಳಂತೆ ಏಳೋದು ಸಾಮಾನ್ಯವಾಗಿದೆ.
ಹೀಗೆ ಏಳುವ ಹೊಂಡಗಳಿಗೆ ಮುಕ್ತಿ ಸಿಗಬೇಕಾದರೆ ಮಳೆಗಾಲ ಮುಗಿಯೋ ತನಕ ಕಾಯಲೇ ಬೇಕಾಗಿದೆ.
ಆದರೆ ಈ ಬಾರಿ ಜಿಲ್ಲೆಯಲ್ಲಿ ಮಳೆ ಬಿಟ್ಟು ತಿಂಗಳುಗಳೇ ಕಳೆದಿದ್ದರೂ, ಮಹಾನಗರ ಪಾಲಿಕೆಗೆ ರಸ್ತೆಗಳ ಗುಂಡಿ ಮುಚ್ಚಬೇಕು ಎನ್ನುವ ಪರಿಜ್ಞಾನವೇ ಇಲ್ಲದಂತಾಗಿದೆ.
ನಗರರ ಬೆಂದೂರುವೆಲ್ ನಿಂದ ಪಂಪುವೆಲ್ ಸಂಪರ್ಕಿಸುವ ರಸ್ತೆಯಲ್ಲಿ ಇದೀಗ ಪ್ರತಿದಿನ ಒಂದಲ್ಲ ಒಂದು ದ್ವಿಚಕ್ರ ವಾಹನಗಳು ಗುಂಡಿಗೆ ಬಿದ್ದು, ಸವಾರ ಕೈ-ಕಾಲು ಮುರಿಯೋದು ಸಾಮಾನ್ಯವಾಗಿ ಬಿಟ್ಟಿದೆ.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮನೆಯ ಪಕ್ಕದಲ್ಲೇ ಇರುವ ಈ ರಸ್ತೆಯ ಗತಿ ಹೀಗಾದರೆ, ಇನ್ನು ನಗರದ ಇತರೆಡೆ ಇರುವ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ.
ತನ್ನ ಪಕ್ಷಕ್ಕೆ, ತನ್ನ ಮುಖಂಡರಿಗೆ ಸಮಸ್ಯೆಯಾದಾಗ ನಿದ್ದೆಯಿಂದ ಏಳುವ ಜನಪ್ರತಿನಿಧಿಗಳು ಜನಸಾಮಾನ್ಯನ ಸಮಸ್ಯೆ ಕನಿಷ್ಟ ಸ್ಪಂದಿಸುವ ಭರವಸೆಯನ್ನೂ ನೀಡಲು ಮುಂದಾಗದಿರುವುದು ವಿಪರ್ಯಾಸವಾಗಿದೆ.
ಕಳೆದ ಒಂದು ತಿಂಗಳಿನಿಂದ ಬೆಂದೂರುವೆಲ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನಪ್ರತಿನಿಧಿಗಳು ಪ್ರತಿದಿನವೂ ಇದೇ ರಸ್ತೆಯಲ್ಲಿ ಸಾಗುತ್ತಿದ್ದರೂ, ಕಣ್ಣಿದ್ದರೂ ಕುರುಡರಂತಾಗಿರುವುದು ಮಂಗಳೂರಿನ ಜನರ ದುರಾದೃಷ್ಟದ ಸಂಗತಿ.
ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ ಪಾಲಿಕೆ ಸಭೆಯಲ್ಲಿ ಸೀಟು ಬಿಸಿ ಮಾಡಲು ಬರುವ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಜನಸಾಮಾನ್ಯನ ಅತೀ ಜರೂರಿನ ಸಮಸ್ಯೆಗೆ ಕಿವಿಯಾಗದಿರುವುದು ಮಾತ್ರ ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.