LATEST NEWS
ಮಂಗಳೂರು ಬೆಂಗಳೂರು ರೈಲ್ವೆ ಹಳಿ ಭೂಕುಸಿತ – ಅಗಸ್ಟ್ 3 ರವರೆಗೆ ರೈಲು ಸಂಚಾರ ಸ್ಥಗಿತ
ಮಂಗಳೂರು ಜುಲೈ 28: ಭಾರೀ ಮಳೆಯಿಂದಾಗಿ ಸಕಲೇಶಪುರ ತಾಲ್ಲೂಕಿನ ಯಡಕುಮೇರಿ– ಕಡಗರವಳ್ಳಿ ನಿಲ್ದಾಣಗಳ ನಡುವೆ ಭೂಕುಸಿತವಾಗಿದ್ದು, ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವ ಕಾರಣ ಅಗಸ್ಟ್ 3 ರವರೆಗೆ ಈ ರೈಲ್ವೆ ಮಾರ್ಗದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ರೈಲು ಮಾರ್ಗದ ಕೆಳಭಾಗದ ಮಣ್ಣು ಸುಮಾರು 500 ಮೀಟರ್ ಆಳಕ್ಕೆ ಕುಸಿದಿದ್ದು, ಕಲ್ಲಿನ ಗೋಡೆ ನಿರ್ಮಿಸುವ ಕಾಮಗಾರಿಯನ್ನು ಮಾಡಲಾಗುತ್ತಿದೆ. ಈ ಪ್ರದೇಶದ ಸಂಪೂರ್ಣ ದಟ್ಟ ಅರಣ್ಯವಾಗಿರುವ ಹಿನ್ನಲೆ ಇಲ್ಲಿ ಯಾವುದೇ ವಾಹನ ಸಂಚಾರ ಸಾಧ್ಯವಿಲ್ಲ. ಈ ಹಿನ್ನಲೆ ಗೂಡ್ಸ್ ರೈಲಿನ ಮೂಲಕ ಕಲ್ಲುಗಳನ್ನು ತರಲಾಗಿದ್ದು, ಜೆಸಿಬಿ, ಹಿಟಾಚಿಯನ್ನು ಸ್ಥಳಕ್ಕೆ ತರಲಾಗಿದೆ. ಮಳೆಯ ನಡುವೆಯೂ ಕಾರ್ಮಿಕರು ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕಾಮಗಾರಿ ನಿರ್ವಹಿಸುವುದು ಕ್ಲಿಷ್ಟಕರವಾಗಿದ್ದು, 5 ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಶಿಲ್ಪಿ ಅಗರ್‌ವಾಲ್ ಹಾಗೂ ಅಧಿಕಾರಿಗಳು ಕಾಮಗಾರಿ ವೀಕ್ಷಿಸಿದರು. ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ರೈಲುಗಳ ಸಂಚಾರ ರದ್ದು: ಕೆಎಸ್‌ಆರ್ ಬೆಂಗಳೂರು–ಕಣ್ಣೂರು (ರೈ.ಸಂ.16511), ಕೆಎಸ್‌ಆರ್ ಬೆಂಗಳೂರು–ಕಾರವಾರ (ರೈ.ಸಂ. 16595), ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ (ರೈ.ಸಂ. 16585), ವಿಜಯಪುರ–ಮಂಗಳೂರು (ರೈ.ಸಂ. 07377) ರೈಲುಗಳ ಸಂಚಾರವನ್ನು ಜುಲೈ 29ರಿಂದ ಆ.3ರವರೆಗೆ ರದ್ದುಪಡಿಸಲಾಗಿದೆ.
ಕಣ್ಣೂರು–ಕೆಎಸ್‌ಆರ್ ಬೆಂಗಳೂರು (ರೈ.ಸಂ. 16512), ಕಾರವಾರ–ಕೆಎಸ್‌ಆರ್ ಬೆಂಗಳೂರು (ರೈ.ಸಂ.16596), ಮುರ್ಡೇಶ್ವರ– ಎಸ್‌ಎಂವಿಟಿ ಬೆಂಗಳೂರು (ರೈ.ಸಂ. 16586), ಮಂಗಳೂರು ಸೆಂಟ್ರಲ್–ವಿಜಯಪುರ (ರೈ.ಸಂ. 07378) ರೈಲುಗಳ ಸಂಚಾರ ಜುಲೈ 30ರಿಂದ ಆ.4ರವರೆಗೆ ರದ್ದಾಗಿದೆ.
ಯಶವಂತಪುರ–ಕಾರವಾರ (ರೈ.ಸಂ. 16515) ರೈಲು ಜುಲೈ 29, 31 ಹಾಗೂ ಆ.2ರಂದು, ಕಾರವಾರ–ಯಶವಂತಪುರ (ರೈ.ಸಂ. 16516) ರೈಲು ಸಂಚಾರವನ್ನು ಜುಲೈ 30, ಆ.1 ಮತ್ತು ಆ.3ರಂದು ರದ್ದುಪಡಿಸಲಾಗಿದೆ.
ಕಾಮಗಾರಿ ಸ್ಥಳಕ್ಕೆ ಕಲ್ಲು ಮಣ್ಣು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಗೂಡ್ಸ್ ರೈಲಿನ ಮೂಲಕ ತರಲಾಯಿತು
ಯಶವಂತಪುರ–ಮಂಗಳೂರು ಜಂಕ್ಷನ್ (ರೈ.ಸಂ. 16575) ಜುಲೈ 30 ಹಾಗೂ ಆ.1ರಂದು, ಮಂಗಳೂರು ಜಂಕ್ಷನ್–ಯಶವಂತಪುರ (ರೈ.ಸಂ. 16576) ಜುಲೈ 31 ಹಾಗೂ ಆ.2ರಂದು, ಯಶವಂತಪುರ–ಮಂಗಳೂರು ಜಂಕ್ಷನ್ (ರೈ.ಸಂ. 16539) ಆ.3ರಂದು ಹಾಗೂ ಮಂಗಳೂರು ಜಂಕ್ಷನ್–ಯಶವಂತಪುರ (ರೈ.ಸಂ. 16540) ರೈಲು ಸಂಚಾರವನ್ನು ಆ.4ರಂದು ರದ್ದುಪಡಿಸಲಾಗಿದೆ.