Connect with us

  FILM

  ಮಂಗಳೂರು: ಸೆ.3ಕ್ಕೆ ಸ್ಯಾಂಡಲ್ ವುಡ್ ನಟ ಅನಂತ್ ನಾಗ್ ಅವರಿಗೆ “ಅನಂತ ಅಭಿನಂದನೆ”

  ಮಂಗಳೂರು, ಆಗಸ್ಟ್ 29: “ಹಿರಿಯ ಚಿತ್ರನಟ, ಕಳೆದ ಐದು ದಶಕಗಳ ಕಾಲ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅನಂತ್ ನಾಗ್ ಅವರ 75ನೇ ವರ್ಷದ ಸಂಭ್ರಮವನ್ನು ಆಚರಿಸಲು ಸೆಪ್ಟೆಂಬರ್ 3ರ ಭಾನುವಾರ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ದಿನವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ಅನಂತ್ ನಾಗ್ ಅಭಿನಂದನಾ ಸಮಿತಿಯ ಸಂಚಾಲಕ ಗೋಪಿನಾಥ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

  “ಅಂದು ಬೆಳಗ್ಗೆ 9:30ಕ್ಕೆ ಅನಂತ್ ನಾಗ್ ದಂಪತಿಯನ್ನು ಸಾರೋಟಿನಲ್ಲಿ ಡೊಂಗರಕೇರಿ ಕೆನರಾ ಹೈಸ್ಕೂಲ್ ನಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ತರಲಾಗುವುದು. 10 ಗಂಟೆಗೆ ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಸಹಿತ ಗಣ್ಯರು ಉದ್ಘಾಟಿಸಲಿದ್ದಾರೆ. ಸಿನಿಮಾಗಳ ದಿಗ್ಗಜರು, ಪತ್ರಕರ್ತರು, ಯುವ ಸಮುದಾಯದೊಂದಿಗೆ ಸಂವಹನ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಯಿಂದ ಮಣಿಕಾಂತ್ ಕದ್ರಿ, ರವೀಂದ್ರ ಪ್ರಭು ಹಾಗೂ ತಂಡದಿಂದ ಅನಂತ್ ನಾಗ್ ಅವರ ಆಯ್ದ ಜನಪ್ರಿಯ ಹಾಡುಗಳು, ನೃತ್ಯ ವೈವಿಧ್ಯ, ಸಾಯಂಕಾಲ ಸನ್ಮಾನ ಸಹಿತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

  ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮಾತನಾಡಿ, “75 ಸಂವತ್ಸರದ ಸಡಗರ ಮತ್ತು ಅವರ ಚಿತ್ರ ಬದುಕಿನ ಐದು ದಶಕಗಳ ಸಾರ್ಥಕ ಪಯಣದ ಸಂಭ್ರಮವನ್ನು ಅವರ ಅಭಿಮಾನಿಗಳ ಜೊತೆಯಲ್ಲಿ ಸೇರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ನಿರ್ಧರಿಸಿದೆ.

  ನಟನೆ ಮಾತ್ರವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿಯೂ ಕಳಕಳಿಯನ್ನು ಹೊಂದಿರುವ ಅನಂತ್ ನಾಗ್ ಅವರು ಯುವ ಪೀಳಿಗೆಗೂ ಮಾದರಿಯಾದವರು. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ಸುಗೊಳಿಸಬೇಕು” ಎಂದರು. ಪತ್ರಿಕಾಗೋಷ್ಠಿಯಲ್ಲಿ ಗೋಪಾಲಕೃಷ್ಣ ಶೆಟ್ಟಿ, ಗಿರಿಧರ್ ಶೆಟ್ಟಿ, ಕುದ್ರೋಳಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply