DAKSHINA KANNADA
ಸ್ಯಾಂಡಲ್‌ವುಡ್ ಟು ಬಾಲಿವುಡ್’ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣ, ವೈಯಕ್ತಿಕವಾಗಿ ‘ಮಂಗಳ ಶಾಲೆ’ಗೆ 10 ಲಕ್ಷ ದೇಣಿಗೆ ನೀಡಿದ ದುಬೈ ಉದ್ಯಮಿ ಹರೀಶ್ ಶೇರಿಗಾರ್

ಮಂಗಳೂರು ಎಪ್ರಿಲ್ 25: ದುಬೈ ಖ್ಯಾತ ಉದ್ಯಮಿಯಾಗಿರುವ ಹರೀಶ್ ಶೇರಿಗಾರ್ ಅವರ ‘ಆಕ್ಮೆ’ ಸಂಸ್ಥೆ ವತಿಯಿಂದ ಎ.12 ರಂದು ದುಬೈನಲ್ಲಿ ನಡೆದ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಮ್ಯೂಸಿಕ್, ಡ್ಯಾನ್ಸ್ ಜೊತೆಗೆ ಕಾಮಿಡಿ ರಸದೌತಣ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣ ಹಾಗೂ ಹರೀಶ್ ಶೇರಿಗಾರ್ ಅವರ ವೈಯಕ್ತಿಕ ನೆಲೆಯಲ್ಲಿ ಸುಮಾರು 10 ಲಕ್ಷ ರೂ. ಹಣವನ್ನು ಮಂಗಳೂರಿನ ‘ಮಂಗಳ ಆಂಗ್ಲ ಮಾಧ್ಯಮ ಶಾಲೆ’ ಅಭಿವೃದ್ಧಿಗೆ ನೀಡಿದ್ದಾರೆ.
ದುಬೈನ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಟ್ರೆಡಿಂಗ್ ಎಲ್ಎಲ್‌ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಹರೀಶ್ ಶೇರಿಗಾರ್ ಅವರು ಮಾತನಾಡಿ, ದುಬೈನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಒಗ್ಗೂಡಿಸಿದ ಹಣವನ್ನು ಪ್ರತಿ ಬಾರಿಯಂತೆ ಈ ಬಾರಿಯೂ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದೆ. ಬಡ ಮತ್ತು ಮದ್ಯಮ ವರ್ಗದ ಮನೆಯ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತು ವಿದ್ಯಾವಂತರಾಗಬೇಕೆಂಬ ಪರಿಕಲ್ಪನೆಯಲ್ಲಿ ಮಂಗಳ ಆಂಗ್ಲ ಮಾಧ್ಯಮ ಶಾಲೆ ಮುನ್ನಡೆಯುತ್ತಿದ್ದು ಸಮುದಾಯವೊಂದು ಸರ್ವರ ಏಳಿಗೆಗಾಗಿ ಮುನ್ನಡೆಯುತ್ತಾ ಲಾಭದ ಯೋಚನೆಯನ್ನು ಮಾಡದೆ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯದ ಮಕ್ಕಳಿಗಾಗಿ ನಡೆಸುತ್ತಿರುವ ಹೆಮ್ಮೆಯ ವಿದ್ಯಾ ಸಂಸ್ಥೆ ಮಂಗಳಾ ಶಾಲೆ ಇನ್ನಷ್ಟು ಅಭಿವೃದ್ಧಿಗೆ ಸಂಘಟಿತವಾಗಿ ಪ್ರಯತ್ನಿಸಲಾಗುವುದು ಎಂದ ಅವರು ದುಬೈನಲ್ಲಿ ನಡೆದ ‘ಸ್ಯಾಂಡಲ್‌ವುಡ್ ಟು ಬಾಲಿವುಡ್’ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸಿದ ಪ್ರಾಯೋಜಕರು, ಹಿತೈಷಿಗಳಿಗೆ ಹರೀಶ್ ಶೇರಿಗಾರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಣ್ಣಗುಡ್ಡ ಇವರ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಮಂಗಳ ಆಂಗ್ಲ ಮಾಧ್ಯಮ ಶಾಲೆ. ಯಾವುದೇ ಡೊನೇಷನ್‌ಗಳಾಗಲಿ, ಇನ್ನಿತರ ಯಾವುದೇ ವಂತಿಗೆ- ದೇಣಿಗೆಗಳನ್ನು ಕೇಳಿ ಪೋಷಕರಿಗೆ ಸಮಸ್ಯೆ ನೀಡದೆ, ಅತಿ ಕಡಿಮೆ ಶುಲ್ಕದೊಂದಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಿದ್ದು ಎಲ್ಲಾ ಸಮಾಜದ ಮಕ್ಕಳಿಗೆ ಯಾವುದೇ ದೇಣಿಗೆ ಇಲ್ಲದ ಶುಲ್ಕ ವ್ಯವಸ್ಥೆ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹರೀಶ್ ಶೇರಿಗಾರ್ ಅವರು ಮಂಗಳಾ ಶಾಲೆಗೆ ದೇಣಿಗೆ ನೀಡಿದ್ದಾರೆ.
ಶಿಕ್ಷಣದ ಮೂಲಕ ಸಮುದಾಯದ ಸುಧಾರಣೆಯ ಕನಸನ್ನು ಸಾಕಾರಗೊಳಿಸಲು ತಮ್ಮ ವೈಯಕ್ತಿಕ ಬದ್ಧತೆಯನ್ನು ಈ ಮೂಲಕ ತೋರಿಸಿರುವ ಹರೀಶ್ ಶೇರಿಗಾರ್ ಅವರಿಗೆ ಶಾಲಾ ಆಡಳಿತ ಮಂಡಳಿ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದೆ.