LATEST NEWS
ತಮಿಳುನಾಡಿನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ
ತಮಿಳುನಾಡಿನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ
ತಮಿಳುನಾಡು , ತಿರುನಲ್ವೇಲಿ ಅಕ್ಚೋಬರ್ 23: ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ಕುಟುಂಬವೊಂದು ಜಿಲ್ಲಾಧಿಕಾರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಜಿಲ್ಲಾಧಿಕಾರಿ ಎದುರೇ ಈ ಘಟನೆ ನಡೆದಿದೆ.
ಕಾಸಿದರ್ಮಮ್ ನಿವಾಸಿ ಇಸಾಕಿ ಮುತ್ತು ಕಳೆದ ಕೆಲವು ತಿಂಗಳ ಹಿಂದೆ ಕೌಟುಂಬಿಕ ಸಮಸ್ಯೆಯ ಹಿನ್ನಲೆಯಲ್ಲಿ ಮುತ್ತು ಲಕ್ಷ್ಮಿ ಎಂಬವರಿಂದ 1.45 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ನಂತರ ಸುಮಾರು 2.34 ಲಕ್ಷ ರೂಪಾಯಿಯನ್ನು ಮುತ್ತು ಲಕ್ಷ್ಮಿ ಅವರಿಗೆ ಮರು ಸಂದಾಯ ಮಾಡಿದ್ದಾರೆ.
ಆದರೆ ಮುತ್ತು ಲಕ್ಷ್ಮಿ ಮತ್ತೆ 2 ಲಕ್ಷ ಹಣ ನೀಡುವಂತೆ ಇಸಾಕಿ ಮುತ್ತು ಅವರ ಮೇಲೆ ಒತ್ತಡ ಹೇರಿ ಕಿರುಕುಳ ನೀಡುತ್ತಿದ್ದಳು ಎಂದು ಹೇಳಲಾಗಿದೆ. ಗೂಂಡಾಗಳನ್ನು ಬಿಟ್ಟು ಬೆದರಿಕೆ ಹಾಕುತ್ತಿದ್ದ ಹಿನ್ನಲೆಯಲ್ಲಿ ಇಸಾಕಿಮುತ್ತು ಹಲವಾರು ಬಾರಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿರಲ್ಲಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ 6 ಬಾರಿ ದೂರು ನೀಡಿದ್ದರು, ಜಿಲ್ಲಾಧಿಕಾರಿ ಮುತ್ತುಲಕ್ಷ್ಮಿ ಮೇಲೆ ಕ್ರಮ ಜರುಗಿಸದೇ ನಿರ್ಲಕ್ಷವಹಿಸಿದ್ದರು ಎಂದು ದೂರಲಾಗಿದೆ.
ಈ ಹಿನ್ನಲೆಯಲ್ಲಿ ಮನನೊಂದ ಇಸಾಕಿ ಮುತ್ತು(27) , ತನ್ನ ಪತ್ನಿ ಸುಬ್ಬಲಕ್ಷ್ಮಿ(25), ಪುತ್ರಿ 4 ವರ್ಷದ ಮಧು ಶರಣ್ಯ ಹಾಗೂ 1 ವರ್ಷ ಹಸುಳೆ ಅಕ್ಷಯ ಪರಣಿಗ ಅವರೊಂದಿಗೆ ಇಂದು ಮುಂಜಾನೆ ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಜಿಲ್ಲಾಧಿಕಾರಿಗೆ ಕಷ್ಟದ ಬಗ್ಗೆ ಮನವಿ ಮಾಡಿದರೂ ನಿರ್ಲಕ್ಷ ವಹಿಸಿದ ಹಿನ್ನಲೆಯಲ್ಲಿ ಪತ್ನಿ, ಮಕ್ಕಳಿಗೆ ಸೀಮೆ ಎಣ್ಣೆ ಸುರಿದು ಸಾಮೂಹಿಕವಾಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ ತಕ್ಷಣಕ್ಕೆ ಸಾಧ್ಯವಾಗಲಿಲ್ಲ. ಆದರೆ ಸತತ ಪ್ರಯತ್ನದ ಬಳಿಕ ಬೆಂಕಿಯನ್ನು ನಂದಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಕುಟುಂಬದ ಎಲ್ಲರೂ ಗಂಭೀರವಾಗಿ ಗಾಯಗೊಂಡಿದ್ದು ದೇಹ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.