DAKSHINA KANNADA
ಮಲಗಿದ್ದ ಅತ್ತಿಗೆ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಸುರಿದ ವೃದ್ದ – ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವು
ಸುಳ್ಯ ಅಕ್ಟೋಬರ್ 25: ವೃದ್ದನೊಬ್ಬ ತನ್ನ ತಮ್ಮನ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಅಕ್ಟೋಬರ್ 12 ರಂದು ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಮೃತ ಮಹಿಳೆಯನ್ನು ಜಯಭಾರತಿ (56) ಎಂದು ಗುರುತಿಸಲಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನಪ್ಪಿದ್ದಾರೆ.
ಅಕ್ಟೋಬರ್ 12 ರಂದು ರಾತ್ರಿ ಮನೆಯ ಕೋಣೆಯಲ್ಲಿ ಮಲಗಿದ್ದ ಜಯಭಾರತಿ ಅವರ ಪತಿಯ ಅಣ್ಣ ಶಂಕರ ನಾಯಕ್ ಎಂಬಾತ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಶೇ. 80 ರಷ್ಟು ಗಾಯಗೊಂಡಿದ್ದ ಮಹಿಳೆಯನ್ನು ಸುಳ್ಯ ಆಸ್ಪತ್ರೆಗೆ ತಂದು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆ ವಿವರ
ಕೊಡಿಯಾಲ ಗ್ರಾಮದ ಕಲ್ಲರ್ಪೆ ನಿವಾಸಿ ಶಂಕರ್ ನಾಯಕ್ (62) ಎಂಬುವರು ಕಿರಿಯ ಸಹೋದರನ ಪತ್ನಿ ಜಯಭಾರತಿ (56) ಅವರಿಗೆ ಬೆಂಕಿ ಹಚ್ಚಿದವರು. 25 ವರ್ಷ ಮನೆಯಿಂದ ದೂರ ಉಳಿದಿದ್ದ ಶಂಕರ ನಾಯಕ್ ಅವರು ವಿವಿಧೆಡೆ ಹೋಟೆಲ್ ಕೆಲಸ ಮಾಡಿಕೊಂಡಿದ್ದರು. ಕೆಲ ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಅವರು ಮನೆಯಲ್ಲೇ ಇದ್ದ ಅವರ ಆರೈಕೆಯನ್ನು ಜಯಭಾರತಿ, ಅವರ ಮಕ್ಕಳು, ಸಹೋದರ ದಿ.ಉಪೇಂದ್ರ ನಾಯಕ್ ಅವರ ಮಕ್ಕಳು ಮಾಡುತ್ತಿದ್ದರು. ಶಂಕರ ನಾಯಕ್ ಅವರು ಮನೆಯವರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಶನಿವಾರ ತಡರಾತ್ರಿ ಮನೆಯ ಹೊರ ಕೋಣೆಯಲ್ಲಿ ಮಲಗಿದ್ದ ಶಂಕರ ನಾಯಕ್ ಎದ್ದು, ಜಯಭಾರತಿ ಅವರು ಮಲಗಿದ್ದ ಕೊಠಡಿಯ ಬಾಗಿಲ ಚಿಲಕವನ್ನು ಹೊರಗಿನಿಂದ ಹಾಕಿ ಪೆಟ್ರೋಲ್ ತಂದು ಕಿಟಕಿ ಮೂಲಕ ಜಯಭಾರತಿ ಮೇಲೆ ಎರಚಿ ಲೈಟರ್‌ನಿಂದ ಬೆಂಕಿ ಹಚ್ಚಿದ್ದರು. ಪೆಟ್ರೋಲ್ ಮೈ ಮೇಲೆ ಬೀಳುತ್ತಿದ್ದಂತೆ ಜಯಭಾರತಿ ಎಚ್ಚರಗೊಂಡಿದ್ದು, ಕೂಡಲೇ ಬೆಂಕಿ ಕೋಣೆ ಹಾಗೂ ಜಯಭಾರತಿ ಮೇಲೆ ವ್ಯಾಪಿಸಿದೆ. ಅದೇ ವೇಳೆ ಶಂಕರ ನಾಯಕ್ ಮೇಲೂ ಬೆಂಕಿ ಆವರಿಸಿಕೊಂಡಿತ್ತು.
ಜಯಭಾರತಿ ಅವರ ಬೊಬ್ಬೆ ಕೇಳಿದ ಆಸುಪಾಸಿನ ಮನೆಯವರು ಬಂದು ಕೋಣೆಯೊಳಗೆ ಉರಿಯುತ್ತಿದ್ದ ಬೆಂಕಿಗೆ ನೀರು ಹಾಯಿಸಿ ಬೆಂಕಿ ಜನರು ನಂದಿಸಿದರು. ಜಯಭಾರತಿ ಅವರ ಮುಖ, ಕುತ್ತಿಗೆ, ಎದೆ ಭಾಗ, ಹೊಟ್ಟೆ, ಕೈ ಕಾಲುಗಳಿಗೆ ಸುಟ್ಟಗಾಯಗಳಾಗಿವೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.