LATEST NEWS
ಹುಟ್ಟೂರಿನ ಅಭಿಮಾನ – ಸೌದಿ ಅರೇಬಿಯಾದ ಬಸ್ ನಲ್ಲಿ ಬೆದ್ರ ಹೆಸರು

ಮಂಗಳೂರು ಮಾರ್ಚ್ 26: ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯವರು ಎಲ್ಲಿ ಹೋದರು ತಮ್ಮ ಹುಟ್ಟೂರನ್ನು ಮರೆಯುವುದಿಲ್ಲ, ತಮ್ಮ ಪ್ರತಿಯೊಂದು ಕಾರ್ಯದಲ್ಲೂ ಹುಟ್ಟೂರಿನ ಮೇಲೆ ಪ್ರೀತಿ ತೋರಿಸುತ್ತಾರೆ. ಒಂದೋ ಹೆಸರಿನಲ್ಲಿ ಹುಟ್ಟೂರು ಇರುತ್ತದೆ. ಇಲ್ಲವೋ ತಾವು ಮಾಡುವ ಕೆಲಸದಲ್ಲಿ ಹುಟ್ಟೂರಿನ ಹೆಸರನ್ನು ಇಟ್ಟಿರುತ್ತಾರೆ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಒಂದು ವೈರಲ್ ಆಗಿದ್ದು, ಸೌದಿ ಅರೇಬಿಯಾದಲ್ಲಿ ಓಡಾಡುವ ಬಸ್ ನಲ್ಲಿ ಬೆದ್ರ ಎಂಬ ಪದ ರಾರಾಜಿಸುತ್ತಿದೆ.
ಸೌದಿ ಅರೇಬಿಯಾದ ಜುಬೈಲ್‌ನಲ್ಲಿ ಬಸ್ ಓಡಿಸುತ್ತಿರುವ ಮೂಡುಬಿದಿರೆ ತಾಲೂಕು ಕಲ್ಲಬೆಟ್ಟಿನ ಮೊಹ್ಮದ್ ಆಲಿ ಎಂಬುವರು ತನ್ನ ಬಸ್ ಹಿಂಬದಿಯ ಗಾಜಿನಲ್ಲಿ ‘ಬೆದ್ರ’ (ಮೂಡುಬಿದಿರೆ ಎಂದು ತುಳುವಿನಲ್ಲಿ ಅರ್ಥ) ಎಂದು ಬರೆದು ಹುಟ್ಟೂರಿನ ಪ್ರೀತಿಯನ್ನು ತಾನು ಕೆಲಸ ಮಾಡುತ್ತಿರುವ ದೂರದ ಸೌದಿಯಲ್ಲಿ ಪಸರಿಸುತ್ತಿದ್ದಾರೆ. ಸೌದಿಯಲ್ಲಿ ಅವರು ಸ್ವಂತ ಬಸ್ ಹೊಂದಿದ್ದು ಮಕ್ಕಾ, ಮದೀನಾದಂತಹ ಪವಿತ್ರ ಕ್ಷೇತ್ರಕ್ಕೆ ಯಾತ್ರಾರ್ಥಿಗಳನ್ನು ಬಾಡಿಗೆಗೆ ಕರೆದೊಯ್ಯುತ್ತಿದ್ದಾರೆ. ಉಳಿದ ಸಮಯಗಳಲ್ಲಿ ಕಂಪನಿಗಳ ಕೆಲಸಗಳಿಗೂ ಬಸ್ ಬಾಡಿಗೆಗೆ ಕೊಡುತ್ತಿದ್ದಾರೆ.

ಹಲವು ವರ್ಷಗಳಿಂದ ಅವರು ಸೌದಿಯಲ್ಲಿ ನೆಲೆಸಿದ್ದಾರೆ. ಕಲ್ಲಬೆಟ್ಟು ಗ್ರಾಮದ ಪಿಲಿಪಂಜರದವರಾಗಿರುವ ಮೊಹ್ಮದ್ ಹುಟ್ಟೂರಿನಲ್ಲಿ ಹಲವು ವರ್ಷ ‘ಕೊಹಿನೂರು’ ಹೆಸರಿನ ಆಟೋ ಬಾಡಿಗೆಗೆ ಓಡಿಸುತ್ತಿದ್ದರು. ಅವರ ಬೆದ್ರ ಹೆಸರಿನ ಬಸ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.