LATEST NEWS
ಉಪಕಾರ ಮಾಡಲು ಹೋಗಿ ಏಳು ತಿಂಗಳು ಸೆರೆವಾಸ ಅನುಭವಿಸಿದ ವ್ಯಕ್ತಿಯ ಕರುಣಾಜನಕ ಕಥೆ

ಉಪಕಾರ ಮಾಡಲು ಹೋಗಿ ಏಳು ತಿಂಗಳು ಸೆರೆವಾಸ ಅನುಭವಿಸಿದ ವ್ಯಕ್ತಿಯ ಕರುಣಾಜನಕ ಕಥೆ
ಉಡುಪಿ ಜನವರಿ 18: ಪರಿಚಿತರಿಗೆ ಪಾರ್ಸೆಲ್ ನ್ನು ಕೊಂಡು ಹೋಗಿ ಜೈಲು ಪಾಲಾಗಿದ್ದ ಶಂಕರ ಪೂಜಾರಿ ಕೊನೆಗೂ ಏಳು ತಿಂಗಳ ಬಳಿಕ ಸಂಕ್ರಾತಿಗೆ ಬಿಡುಗಡೆಯಾಗಿದ್ದಾರೆ. ತಾನು ಮಾಡದ ತಪ್ಪಿಗೆ ನಿರಪರಾಧಿಯಾಗಿ 7 ತಿಂಗಳು ಕುವೈಟ್ ನಲ್ಲಿ ಸೆರೆವಾಸ ಅನುಭವಿಸಿದರೆ, ಇತ್ತ ಅಮಾಯಕನ ಪತ್ನಿ ತನ್ನ ಪತಿಗಾಗಿ ನಡೆಸಿದ ಹೋರಾಟದ ಕಥೆ ಇದು.
ಉಡುಪಿಯ ಮುಬಾರಕ್ ಎಂಬವರು ತಮ್ಮ ಅತ್ತೆಗೆ ತಲುಪಿಸಲು ಶಂಕರ್ ಪೂಜಾರಿ ಕೈಗೆ ಮಾತ್ರೆಗಳ ಪಾರ್ಸೆಲ್ ಕೊಟ್ಟಿದ್ದರು. ಶಂಕರ ಪೂಜಾರಿ ಅವರ ಮಾನವೀಯತೆ ಹಿನ್ನಲೆಯಲ್ಲಿ ತಾನು ಕೊಂಡೊಯ್ದ ಮಾತ್ರೆ ಯಾವುದು? ಈ ಮಾತ್ರೆ ಕುವೈಟ್ ನಲ್ಲಿ ಬಳಸಬಹುದೇ? ಅಥವಾ ಪ್ರಿಸ್ಕ್ರಿಪ್ಶನ್ ಇರದೆ ಮಾತ್ರೆ ಕೊಂಡೊಯ್ಯುವುದು ಕುವೈತ್ ನಲ್ಲಿ ನ್ಯಾಯಸಮ್ಮತವೇ? ಎಂಬ ಯಾವುದೇ ವಿಷಯದ ಬಗ್ಗೆ ಚಿಂತಿಸದೇ ಪಾರ್ಸೆಲ್ ನ್ನು ತೆಗೆದುಕೊಂಡು ಹೋಗಿದ್ದಾರೆ.

ಆದರೆ ಕುವೈತ್ ಏರ್ ಪೋರ್ಟ್ ನಲ್ಲಿ ಅಧಿಕಾರಿಗಳು ಈ ಮಾತ್ರೆಯ ಪಾರ್ಸೆಲ್ ನ ವಿವರಗಳನ್ನು ಕೇಳಿದ್ದಾರೆ. ಸೂಕ್ತ ದಾಖಲೆ ಕೇಳಿದ್ದಾರೆ.ಆದರೆ ಶಂಕರ್ ಪೂಜಾರಿ ನೀಡಿದ ಉತ್ತರ ಅಲ್ಲಿನ ಅಧಿಕಾರಿಗಳಿಗೆ ತೃಪ್ತಿ ನೀಡಿರಲಿಲ್ಲ.ಅವರು ಶಂಕರ್ ಪೂಜಾರಿಯನ್ನು ಜೈಲಿಗೆ ತಳ್ಳಿದ್ದಾರೆ. ಇದಾಗಿ ಏಳು ತಿಂಗಳೇ ಕಳೆದಿದ್ದವು.ಇದೀಗ ಸಂಕ್ರಾಂತಿ ಸಂದರ್ಭ ಶಂಕರ್ ಪೂಜಾರಿ ಕುಟುಂಬಕ್ಕೆ ಸಿಹಿ ಸುದ್ದಿ ಬಂದಿದೆ.ಅವರು ಜೈಲಿನಿಂದ ಬಿಡುಗಡೆ ಆಗಿದ್ದು ,ಇನ್ನೆರಡು ದಿನಗಳಲ್ಲಿ ಊರು ತಲುಪಲಿದ್ದಾರೆ.
ಶಂಕರ್ ಪೂಜಾರಿ ಕುವೈಟ್ ನಲ್ಲಿರುವ ತಸ್ಲೀಂ ಫಾತೀಮಾಗೆ ಈ ಮಾತ್ರೆಗಳನ್ನು ಕೊಡಬೇಕಾಗಿತ್ತು.ಮುಬಾರಕ್ ಎಂಬ ವ್ಯಕ್ತಿ ಈ ಮಾತ್ರೆ ಕೊಟ್ಟಿದ್ದ.ತಸ್ಲೀಂ ,ಮುಬಾರಕ್ ನ ಅತ್ತೆ. ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಶಂಕರ ಪೂಜಾರಿಯನ್ನು ಬಂಧಿಸಿದಾಗ ,ಪಾರ್ಸೆಲ್ ಪಡೆಯಬೇಕಾಗಿದ್ದ ತಸ್ಲೀಂ ಬಂದು ಹೇಳಿಕೆ ನೀಡಿದ್ದರೆ ಯಾವುದೇ ಸಮಸ್ಯೆಯೂ ಇರುತ್ತಿರಲಿಲ್ಲ.ಯಾಕೆಂದರೆ ಆ ಮಾತ್ರೆಗೆ ಅಲ್ಲಿ ನಿಷೇಧ ಇದೆ.
ಒಂದು ವೇಳೆ ಬೇರೆ ದೇಶದ ರೋಗಿಗಳು ತಂದಾಗ ಸೂಕ್ತ ದಾಖಲೆ ಬೇಕು,ಮಾತ್ರೆ ಯಾರಿಗೆ ಸೇರಿದ್ದೋ ,ಅವರು ಹೇಳಿಕೆ ಕೊಡಬೇಕು.ಆದರೆ ಈ ಪ್ರಕರಣದಲ್ಲಿ ಮಾತ್ರೆ ತರಿಸಿಕೊಂಡ ತಸ್ಲೀಂ ಅಲ್ಲಿನ ಪೊಲೀಸರ ಎದುರು ಬಂದು ತನಗೆ ಸೇರಿದ ಮಾತ್ರೆ ಎಂದು ಹೇಳಲು ಹಿಂದೇಟು ಹಾಕಿದ್ದೇ ಈ ಎಲ್ಲ ರಾದ್ದಾಂತಗಳಿಗೆ ಕಾರಣ.ಇದೀಗ ಏಳು ತಿಂಗಳ ಬಳಿಕ ಮಾತ್ರೆ ತರಿಸಿಕೊಂಡ ಮಹಿಳೆ ಅಲ್ಲಿನ ನ್ಯಾಯಾಲಯಕ್ಕೆ ಹಾಜರಾಗಿ ,ಮಾತ್ರೆ ತನಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾರೆ . ಹೀಗಾಗಿ ಶಂಕರ ಪೂಜಾರಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.
ಈ ಮಧ್ಯೆ ಕುಂದಾಪುರದಲ್ಲಿ ನೆಲೆಸಿದ್ದ ಶಂಕರ ಪೂಜಾರಿ ಪತ್ನಿ ಜ್ಯೋತಿ ಮತ್ತು ಮಗಳು ಅನುಭವಿಸಿದ ಸಂಕಟ ಯಾವ ಶತ್ರುವಿಗೂ ಬೇಡ.ಉಡುಪಿಯ ಹ್ಯೂಮನ್ ರೈಟ್ ಫೌಂಡೇಶನ್ ಮತ್ತು ಕುವೈತ್ ನ ಕನ್ನಡಿಗರು, ತುಳುವರ ಸಹಕಾರದಿಂದ ಶಂಕರ್ ಪೂಜಾರಿ ಬಿಡುಗಡೆ ಆಗಿದ್ದಾರೆ.ಇನ್ನೊಬ್ಬರಿಗೆ ಉಪಕಾರ ಮಾಡುವಾಗಲೂ ನಾವು ಎಚ್ಚರಿಕೆಯಿಂದ ಇರಬೇಕು ಎಂಬ ಪಾಠವನ್ನು ಶಂಕರ್ ಪೂಜಾರಿ ಪ್ರಕರಣ ನಮಗೆ ಕಲಿಸುತ್ತದೆ.