UDUPI
ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಸುಮಾರು ಎರಡು ಗಂಟೆಗಳ ನಂತರ ಬದುಕುಳಿದ ಶೇಂದಿ ವ್ಯಾಪಾರಿ…!!
ಉಡುಪಿ ಜುಲೈ 15: ಸುಮಾರು 20 ವರ್ಷಗಳಿಂದ ಶೇಂದಿ ವ್ಯಾಪಾರ ಮಾಡುತಿದ್ದ ವ್ಯಕ್ತಿಯೊಬ್ಬರು ತಾಳೆ ಮರದಲ್ಲಿ ಮೂರ್ಛೆ ಕಳೆದುಕೊಂಡು ಎರಡು ಗಂಟೆಗಳ ಕಾಲ ಮರದಲ್ಲೇ ಸಿಲುಕಿ ಕೊನೆಗೂ ಪವಾಡಸದೃಶ ರೀತಿಯಲ್ಲಿ ಬದುಕುಳಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಕಡಂದಲೆ ಕಲ್ಲೋಳಿಯ ಸಂತೋಷ್ ಎಂಬಾತ ಎಂದಿನಂತೆ ಬೆಳಿಗ್ಗೆ 6.30ರ ಹೊತ್ತಿಗೆ ತಾಳೆ ಮರವೇರಿದವರು ಯಾವುದೋ ಕಾರಣದಿಂದ ಮೂರ್ಛೆ ತಪ್ಪಿದ್ದಾರೆ. ಮರದ ಪಕ್ಕದಲ್ಲೇ ದಾರಿಯಲ್ಲಿ ಹೋಗುವವರು ಇವರನ್ನು ಕಂಡರೂ ಆ ವ್ಯಕ್ತಿಯನ್ನು ರಕ್ಷಿಸುವ ಗೋಜಿಗೆ ಹೋಗಿರಲಿಲ್ಲ, ಈ ಸಂದರ್ಭ ಸುಧಾಕರ್ ಸಾಲ್ಯಾನ್ ಎಂಬವರು ಆಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಅಗ್ನಿ ಶಾಮಕದಳ ಸಿಬ್ಬಂದಿ ಬರುವ ಮೊದಲೇ ಸುಧಾಕರ್ ಅವರು ತಾಳೆ ಮರವೇರುವ ಅದೇ ಊರಿನ ಯುವಕರಾದ ನಾರಾಯಣ, ದಿನೇಶ್ ಹಾಗೂ ಅಶೋಕ್ ಅವರನ್ನು ಕರೆಸಿ ಮರ ಹತ್ತಿಸಿ ವ್ಯಕ್ತಿಯನ್ನು ಬದುಕಿಸುವ ಪ್ರಯತ್ನ ಮಾಡಿದ್ದಾರೆ ಅಷ್ಟರಲ್ಲೇ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಕಾರದೊಂದಿಗೆ ವ್ಯಕ್ತಿಯನ್ನು ಮರದಿಂದ ಹಗ್ಗದ ಮೂಲಕ ಕೆಳಗಿಳಿಸಿದ್ದಾರೆ. ಇನ್ನೇನು ತಾಳೆ ಮರದಿಂದ ಕೆಳೆಗಿಳಿಸಿದ ಸಂತೋಷ್ ನನ್ನು ಆಸ್ಪತ್ರೆಗೆ ಕೊಂಡೊಯ್ಯಲು ಕಾರಿನಲ್ಲಿ ಕೂರಿಸಿ ಹೊರಡುವ ಹೊತ್ತಿಗೆ ಮೂರ್ಛೆ ತಪ್ಪಿದ ಸಂತೋಷ್ ಎಚ್ಚರಗೊಂಡಿದ್ದಾನೆ.