DAKSHINA KANNADA
ಲೈಂಗಿಕ ದೌರ್ಜನ್ಯ ಪ್ರಕರಣ – ಮಾಡದ ತಪ್ಪಿಗೆ ಮರ್ಯಾದೆ ಹೊಯ್ತು ಎಂದು ಅನ್ನ ನೀರು ತ್ಯಜಿಸಿ ವ್ಯಕ್ತಿ ಸಾವು
ಪುತ್ತೂರು ನವೆಂಬರ್ 13: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ವ್ಯಕ್ತಿಯೊಬ್ಬರು ಮಾನಸಿಕ ಖಿನ್ನತೆಯಿಂದ ನಿಧನರಾಗಿದ್ದಾರೆ.
ಮೃತರನ್ನು ಬಡಗನ್ನೂರು ಗ್ರಾಮದ ಪಟ್ಟೆ ನಿವಾಸಿ ಆದಂ ಕುಂಞ (52 ) ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಸ್ವಸ್ಥರಾದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಆದಂ ಕುಂಞ ರವರ ವಿರುದ್ಧ ಇತ್ತೀಚೆಗೆ ಬಡಗನ್ನೂರು ಗ್ರಾಮದ ದಲಿತ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದಲ್ಲಿ ಪೋಕ್ಸೋ(pocso act) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಅಷ್ಟೇ ಅಲ್ಲದೇ ಪೊಲೀಸರಿಂದ ಬಂಧಿತರಾಗಿ 12 ದಿನ ನ್ಯಾಯಾಂಗ ಬಂಧನದಲ್ಲಿದ್ದರು. ಕೆಲವೇ ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಆದಂ ಕುಂಞ ಈ ಘಟನೆಯಿಂದ ನೊಂದುಕೊಂಡಿದ್ದರಲ್ಲದೇ ಊಟ, ನಿದ್ದೆಯನ್ನು ಸಂಪೂರ್ಣವಾಗಿ ಬಿಟ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾನು ಮಾಡದ ತಪ್ಪಿಗೆ ಸಭ್ಯನಾದ ನನ್ನ ಮರ್ಯಾದೆ ಹೋಯಿತಲ್ಲ ಎಂದು ಕೊರಗುತ್ತಾ ಆಹಾರ ಸೇವಿಸುವುದನ್ನು ಬಿಟ್ಟಿದ್ದರು ಎಂದು ತಿಳಿದುಬಂದಿದೆ.