LATEST NEWS
ಸಿಗರೇಟಿನಿಂದ ಸುಟ್ಟು ಗರ್ಭಿಣಿ ಪತ್ನಿಗೆ ಚಿತ್ರಹಿಂಸೆ…ಆರೋಪಿ ಪತಿ ಅರೆಸ್ಟ್

ಕುಂದಾಪುರ – ಗರ್ಭಿಣಿ ಪತ್ನಿಗೆ ಪತಿ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತಿಯ ಕಿರುಕುಳಕ್ಕೆ ಪತ್ನಿ ಪೊಲೀಸ್ ದೂರು ನೀಡಿದ್ದು, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತ ಮಹಿಳೆಯನ್ನು ಬೀಜಾಡಿ ನಿವಾಸಿ ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಇದೀಗ ಪೊಲೀಸ್ ವಶದಲ್ಲಿದ್ದಾನೆ. ಪ್ರಿಯಾಂಕಾ ಹಾಗೂ ಪ್ರದೀಪ್ ಪ್ರಿತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ನಾಲ್ಕೆ ತಿಂಗಳಿಗೆ ಪ್ರದೀಪ್ ನ ಅಸಲಿ ಮುಖ ಬಯಲಿಗೆ ಬಂದಿದ್ದು, ಹೆಂಡತಿಗೆ ವರದಕ್ಷಿಣೆ ತರಲು ದಿನವೂ ಚಿತ್ರಹಿಂಸೆ ನೀಡಲಾರಂಭಿಸಿದ್ದಾನೆ.

ಅಲ್ಲದೆ ತಾನು ನೀಡುವ ಚಿತ್ರಹಿಂಸೆಯನ್ನು ವಿಡಿಯೋ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆರೋಪಿ ಪ್ರದೀಪ್ ಪ್ರಿಯಾಂಕಾಳ ಮೇಲೆ ಸಿಗರೇಟ್ ನಿಂದ ಸುಡಲು ಪ್ರಯತ್ನಿಸಿದ್ದಾನೆ. ಆಕೆ ಕೈಮುಗಿದು ಬೇಡುವೆ ಸುಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕಾಲಿಗೆ ಬೀಳುತ್ತೇನೆ ಎಂದರೂ ಪ್ರದೀಪ್ ತನ್ನ ರಾಕ್ಷಸ ವರ್ತನೆ ತೋರಿದ್ದಾನೆ.
ಈ ಮೊದಲು ಗರ್ಭಿಣಿ ಪ್ರಿಯಾಂಕಾಳ ಹೊಟ್ಟೆಗೆ ತುಳಿದು ಮಗುವನ್ನು ಕೊಲ್ಲುವುದಾಗಿ ಹೇಳಿದ್ದು, ಈ ಸಂದರ್ಭ ಆಕೆಯ ಸೊಂಟಕ್ಕೆ ಪೆಟ್ಟು ಬಿದ್ದಿದೆ. 2 ಲಕ್ಷ ಹಣ ಹಾಗೂ 4 ಪವನ್ ಚಿನ್ನವನ್ನು ವರದಕ್ಷಿಣೆಯಾಗಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.