LATEST NEWS
ಮಲ್ಪೆ: ಜಾತಿನಿಂದನೆ ಕೇಸ್ ವಾಪಸ್ ಪಡೆಯಬೇಕು; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಮೀನುಗಾರರು

ಉಡುಪಿ, ಮಾರ್ಚ್ 22: ಮಲ್ಪೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಮೀನುಗಾರರ ಮೇಲೆ ಹಾಕಿರುವ ಜಾತಿ ನಿಂದನೆ ಪ್ರಕರಣವನ್ನು ತಕ್ಷಣವೇ ವಾಪಸ್ ಪಡೆದು ಎರಡು ದಿನಗಳಲ್ಲಿ ಅವರಿಗೆ ಜಾಮೀನು ಸಿಗುವಂತೆ ಆಗಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಅಥವಾ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ಮೀನುಗಾರರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಮಲ್ಪೆ ಮೀನುಗಾರರ ಸಂಘದ ವತಿಯಿಂದ ಮಲ್ಪೆ ಬಂದರಿನಲ್ಲಿ ಶನಿವಾರ (ಮಾ.22) ಬೃಹತ್ ಪ್ರತಿಭಟನೆ ನಡೆಯಿತು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್, ಮೋಗವಿರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಮೊದಲಾದವರು ಭಾಗವಹಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆಯಡಿ ಕೇಸ್ ದಾಖಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಅದನ್ನು ತಿದ್ದುಪಡಿ ಮಾಡಬೇಕು. ಈ ಪ್ರಕರಣದಲ್ಲಿ ಎಲ್ಲಿಯೂ ಜಾತಿ ನಿಂದನೆಯಾಗಿಲ್ಲ. ಯಾರಿಗೂ ಯಾರ ಜಾತಿಯೂ ತಿಳಿದಿಲ್ಲ. ಮಲ್ಪೆ ಬಂದರಿನಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೇ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸುತ್ತಿದ್ದು, ಕೂಡಲೇ ಜಾತಿ ನಿಂದನೆ ಪ್ರಕರಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ಎಡಿಸಿ ಅಬೀದ್ ಗದ್ಯಾಳ್, ಅಡಿಷನಲ್ ಎಸ್ ಪಿ ಸಿದ್ದಲಿಂಗಪ್ಪ ಆಗಮಿಸಿ ಮನವಿ ಸ್ವೀಕರಿಸಿದರು.
ಮಲ್ಪೆ ಪೇಟೆ ಸ್ವಯಂ ಪ್ರೇರಿತವಾಗಿ ಬಂದ್ ಆಗಿತ್ತು. ಅಂಗಡಿ ಮುಂಗಟ್ಟು ಮಾಲಕರು ಪ್ರತಿಭಟನೆಗೆ ಬೆಂಬಲ ಸೂಚಿಸಿ ಬಂದ್ ಮಾಡಿದ್ದರು.
ಪ್ರಮುಖ ಬೇಡಿಕೆಗಳು:
- ಬಂಧಿಸಿರುವ ಮೀನುಗಾರ ಮಹಿಳೆಯರ ಮೇಲೆ ಹಾಕಿರುವ ಜಾತಿ ನಿಂದನೆ ಪ್ರಕರಣ ವಾಪಸ್ ಪಡೆದು, ಬಿಡುಗಡೆ ಮಾಡಬೇಕು.
- ಬಿಡುಗಡೆ ಮಾಡದಿದ್ದರೆ, ಉಗ್ರ ಹೋರಾಟದ ಎಚ್ಚರಿಕೆ
- ಮಲ್ಪೆಯಲ್ಲಿ ಕಳ್ಳತನ ಮಾಡುವವರ ವಿರುದ್ಧ ಪಿಟ್ಟಿ ಕೇಸ್ ಹಾಕದೆ ಎಫ್‌ಐಆರ್ ಹಾಕಿ ಕಠಿನ ಕ್ರಮ ಜರಗಿಸಬೇಕು.
- ಬಂದರಿನಲ್ಲಿ ಯಾವುದೇ ಸಮಸ್ಯೆಯಾದರೂ ಮಲ್ಪೆ ಮೀನುಗಾರರ ಸಂಘದ ಗಮನಕ್ಕೆ ತಂದು ಪರಿಹಾರ ಮಾಡಬೇಕು.
- ಇಬ್ಬರು ಪೊಲೀಸ್ ಕಾನ್ಸೆಬಲ್ ಗಳನ್ನು ತಕ್ಷಣವೇ ವಜಾ ಗೊಳಿಸಬೇಕು.