Connect with us

    BELTHANGADI

    ಹಿಂದುತ್ವದ ಹೆಸರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ರೌಡಿಸಂ ಮಾಡುತ್ತಿದ್ದಾರೆ : ಶಶಿರಾಜ್ ಶೆಟ್ಟಿ‌ ಆರೋಪ

    ಬೆಳ್ತಂಗಡಿ, ಮೇ 30: ಮಹೇಶ್ ಶೆಟ್ಟಿ ತಿಮರೋಡಿ ಅವರು ಹಿಂದುತ್ವದ ಹೆಸರಿನಲ್ಲಿ ರೌಡಿಸಂ ಮಾಡುತ್ತಿದ್ದಾರೆ. ಅವರದ್ದು ಶೇ. 20 ಹಿಂದುತ್ವವಾದರೆ ಶೇ. 80 ರೌಡಿಸಂ ಆಗಿದೆ ಎಂದು ಉದ್ಯಮಿ ಶಶಿರಾಜ್ ಶೆಟ್ಟಿ‌ ಗುರುವಾಯನಕೆರೆ ಹೇಳಿದ್ದಾರೆ.

    ಗುರುವಾಯನಕೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಸಂಘಟಕ ಎಂಬ ಹೆಸರಿನಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಇತ್ತೀಚಿಗೆ ಪತ್ರಿಕಾಗೋಷ್ಠಿ ನಡೆಸಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಅವರು ಕೇಳಿದ ಸರಳ ಪ್ರಶ್ನೆಗೆ ಉತ್ತರ ನೀಡುವುದು ಬಿಟ್ಟು, ಕೀಳು ಮಟ್ಟದ ಟೀಕೆ ಮಾಡಿದ್ದಾರೆ. ಸುಳ್ಳು ಆಪಾದನೆ, ಕೆಟ್ಟ ಪದಪ್ರಯೋಗದ ಮೂಲಕ ಹೊರಗಿನ ಸಮಾಜದಲ್ಲಿ ಹರೀಶ್ ಪೂಂಜ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ರೂಪಿಸುವ ಸಂಚು ಮಾಡಿದ್ದಾರೆ ಎಂದು ಆರೋಪಿಸಿದರು.

    ವೈಯುಕ್ತಿಕ ಬದುಕಿಗಾಗಿ ಹಾಕಿಕೊಂಡ ಕೇಸುಗಳನ್ನು ಹಿಂದುತ್ವಕ್ಕಾಗಿ ಮಾಡಿದ್ದು ಎಂದು ಬಿಂಬಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು ಮಹೇಶ್‌ ಶೆಟ್ಟಿ ತಿಮರೋಡಿ ಹಿಂದುತ್ವಕ್ಕಾಗಿ ಮತ್ತು ಹಿಂದೂಗಳ ವಿರುದ್ಧವೇ ದೌರ್ಜನ್ಯ ನಡೆಸಿ ಹಾಕಿಸಿಕೊಂಡ ಕೇಸುಗಳ ಬಗ್ಗೆ ಸ್ಪಷ್ಟನೆ ನೀಡಬೇಕು. ನನ್ನಿಂದಲೇ ಹಿಂದುತ್ವ ನನ್ನಿಂದಲೇ ಬಿಜೆಪಿ ಎನ್ನುವ ರೀತಿಯಲ್ಲಿ ತಿಮರೋಡಿ ಮಾತನಾಡಿರುತ್ತಾರೆ. ವಾಸ್ತವದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹುಟ್ಟುವ ಮೊದಲೇ ಹಿಂದುತ್ವವೂ ಇತ್ತು ಹಿಂದೂ ಸಂಘಟನೆಗಳೂ ಇದ್ದವು. ಮಹೇಶ್‌ ಶೆಟ್ಟಿ ಅವರದ್ದು 20% ಹಿಂದುತ್ವ 80% ರೌಡಿಸಂ. ವ್ಯಾಜ್ಯ, ತಕರಾರು ಇರುವ ಇಬ್ಬರು ಹಿಂದೂಗಳ ಜಾಗದಲ್ಲಿ ಮೂಗು ತೂರಿಸುವುದು, ಒಬ್ಬ ಹಿಂದೂವಿಗೆ ಅನ್ಯಾಯ ಮಾಡುವುದು, ಕೊನೆಗೆ ದಬ್ಬಾಳಿಕೆ, ಬೆದರಿಕೆ ಮೂಲಕ ಮೊದಲು ಸಪೋರ್ಟ್‌ ಮಾಡಿದ ಹಿಂದೂವಿನಿಂದ ಜಾಗವನ್ನು ಕಿತ್ತು ಕೊಳ್ಳುವುದು, ಇದು ನಿಮ್ಮ ಹಿಂದುತ್ವವೇ? ಹಿಂದೂಗಳೊಂದಿಗೆ ಹೋರಾಡಿಯೇ ಹಿಂದೂ ಹೋರಾಟಗಾರ ಎನಿಸಿಕೊಂಡಿರುವುದೇ ತಿಮರೋಡಿಯ ಹೆಚ್ಚುಗಾರಿಕೆ ಎಂದರು.

    ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸಮಸ್ಯೆ ಇರುವುದು ಹರೀಶ್ ಪೂಂಜ ಕೆಲಸ ಮಾಡಿಲ್ಲ, ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದಲ್ಲ, ಹರೀಶ್ ಪೂಂಜ ಅವರ ನಾಯಕತ್ವ ಇವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ,  ತಿಮರೋಡಿ ಒಬ್ಬ ಸ್ವಾರ್ಥ ಹೋರಾಟಗಾರ ಎಂದು ಆರೋಪಿಸಿದರು.

    ವಾಸ್ತವದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಎಂದಿಗೂ ಬಿಜೆಪಿ ಪರವಾಗಿರಲಿಲ್ಲ. ಪ್ರಭಾಕರ ಬಂಗೇರ ಅವರನ್ನು ಸೋಲಿಸಿದ್ದೇ ತಿಮರೋಡಿ ಬಣ. ಪ್ರತಿ ಬಾರಿಯೂ ಬಿಜೆಪಿ ವಿರುದ್ಧವಾಗಿಯೇ ಹೋರಾಟ ನಡೆಸಿದ್ದು ಬಿಟ್ಟರೆ ಬಿಜೆಪಿ ಪರವಾಗಿ ಎಂದು ತಿಮರೋಡಿ ಹೋರಾಟ ಮಾಡಿಲ್ಲ. ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮೈಲೇಜ್ ನೀಡಿದ್ದೇ ಸೌಜನ್ಯ ಪ್ರಕರಣ. ಹಿಂದೂ ಸಹೋದರಿ ಸೌಜನ್ಯಳ ಹತ್ಯೆಯನ್ನು ಯಾರು ಕೂಡ ಬೆಂಬಲಿಸಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಮಹೇಶ್ ಶೆಟ್ಟಿ ತಿಮರೋಡಿ ಇನ್ನೂ ತನಗೆ ಬೆಳೆಯಲು, ಹೆಸರು ಮಾಡಲಿರುವ ದಾರಿ ಇದೊಂದೇ ಎಂದುಕೊಂಡು ಸೌಜನ್ಯ ಪ್ರಕರಣವನ್ನು ಕೈಗೆತ್ತಿಕೊಂಡರು.

    ಸೌಜನ್ಯ ಹೋರಾಟದಿಂದ ಸಂಗ್ರಹಿಸಿದ ಕೋಟಿ ಕೋಟಿ ಹಣ ಎಲ್ಲಿ ಹೋಯಿತು ಎಂಬುದಕ್ಕೆ ಅವರು ಇದುವರೆಗೂ ಲೆಕ್ಕ ನೀಡಲಿಲ್ಲ. ಸೌಜನ್ಯ ಪ್ರಕರಣದಲ್ಲಿ ಎಸ್ಐ ಆಗಿದ್ದ ಯೋಗೀಶ್ ಅವರ ಮೇಲೆ ಆರೋಪ ಮಾಡಿದ್ದ ತಿಮರೋಡಿ ನಂತರದ ದಿನಗಳಲ್ಲಿ ಅದೇ ಎಸ್‌ಐ ಯೋಗೀಶ್ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡಿದ್ದರು, ಇದರ ಬಗ್ಗೆ ಸಾರ್ವಜನಿಕರಿಗೆ, ಹೋರಾಟಗಾರರಿಗೆ ಮಾಹಿತಿಯೇ ನೀಡಿಲ್ಲ. ಹರೀಶ್‌ ಪೂಂಜ ಅವರು ಸೌಜನ್ಯಳ ಕುಟುಂಬಕ್ಕೆ ಯಾವ ಅನ್ಯಾಯವನ್ನೂ ಮಾಡಿಲ್ಲ, ಸೌಜನ್ಯಳ ಸಹೋದರಿಗೆ ಒಂದು ವರ್ಷದವರೆಗೆ ತನ್ನ ಕಚೇರಿಯಲ್ಲೇ ಶಾಸಕ ಹರೀಶ್ ಪೂಂಜ ಕೆಲಸ ಒದಗಿಸಿದ್ದರು.  ಸೌಜನ್ಯ ಅವರ ಕುಟುಂಬದೊಂದಿಗೆ ಉತ್ತಮ ಸಂಬಂಧ ಇಂದಿಗೂ ಉಳಿಸಿಕೊಂಡಿದ್ದಾರೆ. ಹರೀಶ್ ಪೂಂಜ ಎಂದು ಕೂಡ ಸೌಜನ್ಯದ ಕುಟುಂಬದ ವಿರುದ್ಧ ನಡೆದುಕೊಂಡಿಲ್ಲ ಎಂದರು.

    ಮಹೇಶ್ ಶೆಟ್ಟಿ ತಿಮರೋಡಿ ಅವರ ರೌಡಿಸಂಗೆ ಬೆದರುವ ಕಾಲ ಮುಗಿದು ಹೋಗಿದೆ ಎಂದ ಅವರು  ದರ್ಪದ ಮಾತುಗಳನ್ನಾಡುತ್ತಾ ಹರೀಶ್ ಪೂಂಜ ಅವರನ್ನು ಬೀದಿಗೆ ತಂದು ನಿಲ್ಲಿಸುತ್ತೇವೆ ಎಂದು ತಿಮರೋಡಿ ಹೇಳಿದ್ದಾರೆ. ತಾಕತ್ತಿದ್ದರೆ ನೀವು ಹರೀಶ್ ಪೂಂಜಾ ಅವರ ಗಾಡಿಯನ್ನು ನಿಲ್ಲಿಸಿ, ನಿಮ್ಮನ್ನು ಮನೆಯಿಂದ ಹೊರಗೆ ಬರಲು ನಾವು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

    ಶಂಕರ್‌ ಶೆಟ್ಟಿ ತಿಮರೋಡಿ ಅವರು ಮಾತನಾಡಿ ತಿಮರೋಡಿ ನಮ್ಮ ಪೂರ್ವಜರ ಭೂಮಿಯಲ್ಲ, ನಮ್ಮ ಹಿರಿಯರು ತಿಮರೋಡಿಯಲ್ಲಿ ಜಾಗ ಖರೀದಿಸಿ ವಾಸಿಸುತ್ತಿದ್ದಾರೆ. ತಿಮರೋಡಿಯಲ್ಲಿ ನಮ್ಮ ಹಿರಿಯರು ಮನೆ ಖರೀದಿಸಿದ್ದಕ್ಕೆ ಮೂಲ ದಾಖಲೆಗಳು ನನ್ನಲ್ಲಿವೆ. ಆ ದಾಖಲೆಗಳಲ್ಲಿ ಎಲ್ಲೂ ಕೂಡಾ ತಿಮರೋಡಿ ಬೂಡು ಎಂದಾಗಲಿ, ತಿಮರೋಡಿ ಗುತ್ತು ಎಂದಾಗಲಿ, ಧರ್ಮಾಧಿಕಾರಿ ಎಂಬ ಉಲ್ಲೇಖಗಳಾಗಲಿ ಯಾವುದೂ ಇಲ್ಲ. ಕಟೀಲಿನ ಆಸ್ರಣ್ಣರು, ಧರ್ಮಸ್ಥಳದ ಧರ್ಮಾಧಿಕಾರಿಗಳು ತಿಮರೋಡಿಯ ಮಣ್ಣಿಗೆ ಬಂದು ಹೋಗಿದ್ದಾರೆ, ಅಂತಹ ಪುಣ್ಯದ ಮಣ್ಣದು. ಆದರೆ ಮಹೇಶ್‌ ಶೆಟ್ಟಿ ತಿಮರೋಡಿ ಬಂದಮೇಲೆ ತಿಮರೋಡಿ ಮನೆತನದ ಹೆಸರು ಸಂಪೂರ್ಣವಾಗಿ ಹಾಳಾಗಿದೆ.

    ಮಹೇಶ್‌ ಶೆಟ್ಟಿ ತಿಮರೋಡಿಯ ಎಲ್ಲಾ ಪ್ರಕರಣಗಳಿಗೆ ಜಾಮೀನು ನೀಡಿದ್ದು ನಾನೇ. ನಾನು ಇಷ್ಟೆಲ್ಲ ಸಹಾಯ ಮಾಡಿದರೂ ಆತ ಕೊನೆಗೆ ನನ್ನನ್ನೇ ಜೈಲಿಗೆ ಹಾಕಲು ಪ್ರಯತ್ನಿಸಿದ್ದಾನೆ. ತಿಮರೋಡಿಯ ನಮ್ಮ ಮನೆಗೆ ರಸ್ತೆ ಇಲ್ಲದ ಕಾಲದಲ್ಲಿ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ಯೋಜನೆ ಮೂಲಕ 20,000 ಹಣವನ್ನು ನಾನು ತೆಗೆದುಕೊಟ್ಟು ಅಲ್ಲಿನ 50 ಮನೆಗಳಿಗೆ ಬೇಕಾಗುವ ರಸ್ತೆ ಮಾಡಿಕೊಟ್ಟಿದ್ದೆ. ಇಂದು ಆ ರಸ್ತೆಯನ್ನೂ ಬಂದ್ ಮಾಡಿದ್ದಾನೆ. ಮಹೇಶ್‌ ಶೆಟ್ಟಿ ತಿಮರೋಡಿಯ ಮೇಲಿರುವುದು ಜಮೀನು ವ್ಯಾಜ್ಯದ ಕೇಸುಗಳು, ಅದು ಸ್ವಾರ್ಥ ಹೋರಾಟದ ಕೇಸುಗಳು, ಹಿಂದೂ ಸಮಾಜಕ್ಕಾಗಿ ಎಳೆದುಕೊಂಡ ಕೇಸುಗಳಲ್ಲ ಎಂದರು.

    ಸದಾಶಿವ ಶೆಟ್ಟಿ ಸವಣಾಲು ಮಾತನಾಡಿ “ನನ್ನ ಪಟ್ಟಾ ಜಾಗವನ್ನು ಕೂಡಾ ಮಹೇಶ್ ಶೆಟ್ಟಿ ತಿಮರೋಡಿ ಕಬಳಿಸಲು ಯತ್ನಿಸಿದ್ದಾನೆ. ಇನ್ನಿಲ್ಲದ ಕಾಟ ನೀಡಿ ನನ್ನನ್ನು ಆ ಜಾಗ ಬಿಡುವಂತೆ ಕೂಡ ಎಲ್ಲಾ ಪ್ರಯತ್ನ ನಡೆಸಿದ್ದಾನೆ. ಮನೆಗೆ ಕಲ್ಲು ತೂರಾಟ ನಡೆಸಿ, ಗೇಟ್ ಮುರಿದು ಹಾಕಿ ಕೊಲೆ ಯತ್ನ ಕೂಡಾ ಮಾಡಿದ್ದರು. ನನ್ನ ಜಾಗಕ್ಕೆ ತೆರಳದಂತೆ ಮಾಡಲು ಸುತ್ತಲಿನ ಜಾಗ ಕಬ್ಜಾ ಮಾಡಿಕೊಂಡು ಅಲ್ಲಿ ದೊಡ್ಡ ಕಂದಕ ನಿರ್ಮಿಸಿದ್ದರು. ಇವರ ಕುತಂತ್ರದಿಂದಾಗಿ ನಾನು ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಯಿತು. ಇದಕ್ಕಾಗಿ ನಾನು ನನ್ನ ಸರ್ವಸ್ವ ವನ್ನು ಕೂಡ ಕಳೆದುಕೊಂಡಿದ್ದಾನೆ. ಮನೆಯಲ್ಲಿ ನಾವು ಕೂಡಿಟ್ಟ ಹಣ, ಚಿನ್ನ ಎಲ್ಲವನ್ನು ಕೂಡ ಮಾರಿ ಕೇಸು ನಿಭಾಯಿಸಿದ್ದೇನೆ. ನನ್ನ ಜೀವನವನ್ನು ಮಹೇಶ್‌ ಶೆಟ್ಟಿ ತಿಮರೋಡಿ ಸರ್ವನಾಶ ಮಾಡಿದ್ದಾನೆ” ಎಂದು ಆರೋಪಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ರಂಜಿತ್ ಮದ್ದಡ್ಕ ಮತ್ತು ನ್ಯಾಯವಾದಿ ಯತೀಶ್ ಶೆಟ್ಟಿ, ಗೋಪಾಲ ಪೂಜಾರಿ ಗರ್ಡಾಡಿ ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *