DAKSHINA KANNADA
ಮಹದಾಯಿ ನೀರು ಹಂಚಿಕೆ ವಿವಾದ, ಮಂಗಳೂರಿನಲ್ಲಿ ರೈಲು ತಡೆಗೆ ಕರವೇ ನಿರ್ಧಾರ

ಮಹದಾಯಿ ನೀರು ಹಂಚಿಕೆ ವಿವಾದ, ಮಂಗಳೂರಿನಲ್ಲಿ ರೈಲು ತಡೆಗೆ ಕರವೇ ನಿರ್ಧಾರ
ಮಂಗಳೂರು,ಜನವರಿ 24:ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಲು ಉದ್ಧೇಶಿಸಿದೆ.
ನಾಳೆ ಬೆಳಿಗ್ಗೆ 11 ಗಂಟೆಗೆ ಈ ರೈಲು ತಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ.ರ.ವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದ್ದಾರೆ.

ಈ ನಿರ್ಧಾರಕ್ಕೆ ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕ.ರ.ವೇ ಜಿಲ್ಲಾ ಘಟಕದ ವಿರುದ್ಧ ಜನ ತಮ್ಮ ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದಷ್ಟು ಜನ ಕ.ರ.ವೇ ನಿರ್ಧಾರವನ್ನು ಹೀಯಾಳಿಸಲೂ ಆರಂಭಿಸಿದ್ದಾರೆ.
ಇದೇ ಕ.ರ.ವೇ ಬೆಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾಗಿರುವ ಜಾನ್ ಎಂಬಾತ ತುಳುನಾಡಿನ ಬಗ್ಗೆ ಹಾಗೂ ತುಳು ಭಾಷೆಯ ಬಗ್ಗೆ ಅವಹೇಳನಕಾರಿ ಹಾಗೂ ಅವಮಾನಕಾರಿಯಾಗಿ ಹೇಳಿಕೆ ನೀಡಿದಾಗ ತುಟಿಕ್ ಪಿಟಿಕ್ ಎನ್ನದ ದಕ್ಷಿಣಕನ್ನಡ ಜಿಲ್ಲಾ ಕ.ರ.ವೇ ಅಧ್ಯಕ್ಷರ ವಿರುದ್ಧ ಆಕ್ರೋಶದ ನುಡಿಗಳೂ ಇದೀಗ ಕೇಳಿ ಬರುತ್ತಿದೆ.