DAKSHINA KANNADA
ಪುತ್ತೂರು ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಮಹಾಶಿವರಾತ್ರಿ ಜಾಗರಣೆ
ಪುತ್ತೂರು ಮಾರ್ಚ್ 09: ದೇಶದ ಪ್ರಮುಖ ಕಾರಣಿಕ ಶಿವಕ್ಷೇತ್ರಗಳಲ್ಲಿ ಒಂದಾದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇಗುಲದಲ್ಲಿ ಶಿವರಾತ್ರಿ ಜಾಗರಣೆ ನಡೆಯಿತು. ಶಿವರಾತ್ರಿ ಹಿನ್ನಲೆ ದೇವಸ್ಥಾನದಲ್ಲಿ ಮಹಾರುದ್ರಯಾಗ, ಶತರುದ್ರಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು. ಬೆಳಗ್ಗಿನಿಂದ ದೇವಳದಲ್ಲಿ ಭಕ್ತ ಸಾಗರ ಹರಿದು ಬಂದಿತ್ತು. ಭಕ್ತರು ಮಹಾಲಿಂಗೇಶ್ವರ ದರ್ಶನ ಪಡೆದು ಪುನೀತರಾದರು.
ದೇವಳದ ತುಳಸಿ ಕಟ್ಟೆ ಬಳಿ ಭಕ್ತರು ಶ್ರೀ ದೇವರಿಗೆ ಬಿಲ್ಚಾರ್ಚಣೆ ಸಂಕಲ್ಪ ಕೈಗೊಂಡರು. ಮಧ್ಯಾಹ್ನ ಹವನ ಅಭಿಷೇಕ ಪೂಜಾದಿಗಳು ಜರಗಿ ರಾತ್ರಿಯ ವೇಳೆಗೆ ಶ್ರೀ ದೇವರ ಉತ್ಸವದ ಬಲಿ ಹೊರಟು, ತಂತ್ರ ಸುತ್ತು ಜರಗಿ ಹೊರಾಂಗಣದಲ್ಲಿ ಉಡಕೆ , ಚಂಡೆ ,ವಾದ್ಯ , ಸರ್ವವಾದ್ಯಸುತ್ತುಗಳ ನಂತರ ಕಟ್ಟೆಪೂಜೆ, ಪಲ್ಲಕಿ ಉತ್ಸವ, ಅಷ್ಟಾವಧಾನ ಸೇವೆ, ಚಂದ್ರಮAಡಲ ರಥೋತ್ಸವ , ತೆಪ್ಪೋತ್ಸವದೊಂದಿಗೆ ಉತ್ಸವ ಮುಗಿದು , ತಡರಾತ್ರಿಯಲ್ಲಿ ಮಹಾಮಹಿಮಗೆ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಉತ್ಸವ ಬಲಿ ನಡೆಯಿತು.
ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ನ ನೇತೃತ್ವದಲ್ಲಿ ದೇವಳದ ಸಹಯೋಗದೊಂದಿಗೆ ಬೆಳಿಗ್ಗೆ ದೇವಳ ಗದ್ದೆಯಲ್ಲಿರುವ ಶಿವನ ವಿಗ್ರಹದ ಬಳಿ ಒಂದು ಸುತ್ತು ಬಂದು ಬಳಿಕ ದೇವಳದ ಎದುರಿನ ಅಂಗಣದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಬೆಳಗ್ಗಿನ ತನಕ ಜಾಗರಣ ಭಜನಾ ಕಾರ್ಯಕ್ರಮ ನಡೆಯಿತು.